ಮಂಗಳೂರು : ಮಹಾನಗರ ಪಾಲಿಕೆಯಿಂದ ನಡೆದ ಟೈಗರ್ ಕಾರ್ಯಾಚರಣೆಯನ್ನು ವಿರೋಧಿಸಿ ಬೀದಿಬದಿ ವ್ಯಾಪಾರಸ್ಥರು ಮನಪಾ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.
ಮನಪಾ ಅಧಿಕಾರಿಗಳು ನಿನ್ನೆ ಟೈಗರ್ ಕಾರ್ಯಾಚರಣೆ ಹೆಸರಿನಲ್ಲಿ ನಗರದ ಮಣ್ಣಗುಡ್ಡ, ಲೇಡಿಹಿಲ್, ಯೆಯ್ಯಾಡಿ, ಸೆಂಟ್ರಲ್ ಮಾರುಕಟ್ಟೆಯಲ್ಲಿನ ಗೂಡಂಗಡಿಗಳ ಮೇಲೆ ಅಂಗಡಿಗಳನ್ನು ಬುಲ್ಡೇಜರ್ ಹತ್ತಿಸಿ ಪುಡಿಪುಡಿಗಟ್ಟಿದ್ದರು. ಬೀದಿಬದಿ ವ್ಯಾಪಾರಿಗಳ ಅಳಲು, ಪ್ರತಿಭಟನೆಗಳಿಗೂ ಜಗ್ಗದೆ ಅಲ್ಲಿಂದ ತೆರುವ ಮಾಡಿಸಲಾಗಿತ್ತು. ಇದರಿಂದ ಆಕ್ರೋಶಿತರಾದ ನೂರಾರು ಬಿದಿಬದಿ ವ್ಯಾಪಾರಿಗಳು ಮನಪಾ ಆಯುಕ್ತರ ಕಚೇರಿಯ ಬಾಗಿಲಿನಲ್ಲಿ ಕುಳಿತು ನ್ಯಾಯಕ್ಕಾಗಿ ಆಗ್ರಹಿಸಿದರು. ಮನಪಾ ಮೇಯರ್ ಇಂದೋರ್ ಪ್ರವಾಸದಲ್ಲಿದ್ದು, ಆಯುಕ್ತರು ಕಚೇರಿಗೆ ಬಂದಿಲ್ಲ. ಅವರು ಬರುವವರೆಗೆ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಬೀದಿಬದಿ ವ್ಯಾಪಾರಿಗಳು ಪಟ್ಟು ಹಿಡಿದಿದ್ದಾರೆ.
ಈ ವೇಳೆ ಮನಪಾದ ಓರ್ವ ಸಿಬ್ಬಂದಿ ಹಾಗೂ ಬೀದಿಬದಿ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಅವರನ್ನು ಹೊರಗಡೆ ಕಳುಹಿಸಬೇಕೆಂದು ಬೀದಿಬದಿ ವ್ಯಾಪಾರಸ್ಥರು ಪಟ್ಟು ಹಿಡಿದ ಬಳಿಕ ಅವರನ್ನು ಹೊರಗಡೆ ಕಳುಹಿಸಲಾಯಿತು.
ಬಳಿಕ ಅಲ್ಲಿಗೆ ಮನಪಾ ಜಂಟಿ ಆಯುಕ್ತ ರವಿ ಕುಮಾರ್ ಅಲ್ಲಿಗೆ ಆಗಮಿಸಿ ಬೀದಿಬದಿ ವ್ಯಾಪಾರಿಗಳನ್ನು ಮನವೊಲಿಸುವ ಕಾರ್ಯ ಮಾಡಿದರು. ಆದರೆ ಆಕ್ರೋಶಿತ ವ್ಯಾಪಾರಿಗಳು ಅವರನ್ನೇ ತರಾಟೆಗೆ ತೆಗೆದುಕೊಂಡು, ಮನಪಾ ಐಡಿ ಕಾರ್ಡ್ ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡಿತ್ತು. ಇದೀಗ ಸಹಾಯಕ ಆಯುಕ್ತರು ಅದು ಐಡಿ ಕಾರ್ಡ್ ನಕಲಿ ಎನ್ನುತ್ತಿದ್ದಾರೆ. ಹಾಗಾದರೆ ನಕಲಿ ಐಡಿ ಕಾರ್ಡ್‌ಗೆ ಸಹಿ ಹಾಕಿರುವ ತಮ್ಮನ್ನೇ ಬಂಧಿಸಬೇಕಲ್ಲವೇ? ಕೆಲ ಅಧಿಕಾರಿಗಳು ಮದ್ಯಸೇವನೆ ಮಾಡಿ ಬಂದಿದ್ದಾರೆ. ಸೀಝ್ ಮಾಡಲಾಗಿರುವ ವಸ್ತುಗಳನ್ನು ವಾಪಾಸ್ ಕೊಡಿ. ಜಖಂಗೊಳಿಸಿರುವ ವಸ್ತುಗಳಿಗೆ ಪರಿಹಾರ ಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.