ಮಂಗಳೂರು : ಸುರತ್ಕಲ್‌ನ ಕಾಟಿಪಳ್ಳದಲ್ಲಿ ಮಸೀದಿಗೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾನ ಕಟ್ಲದ ಭರತ್ ಶೆಟ್ಟಿ (26), ಚೆನ್ನಪ್ಪ ಶಿವಾನಂದ ಚಲವಾದಿ ಅಲಿಯಾಸ್ ಮುತ್ತು (19), ಚೆಳಾರುವಿನ ನಿತಿನ್ ಹಡಪ (22), ಮುಂಚೂರು ಕೊಡಿಪಾಡಿಯ ಸುಜಿತ್ ಶೆಟ್ಟಿ (23), ಹೊಸಬೆಟ್ಟು ಗ್ರಾಮದ ಅಣ್ಣಪ್ಪ ಅಲಿಯಾಸ್ ಮನು (24), ಮತ್ತು ಕಾಟಿಪಳ್ಳ ಮೂರನೇ ಬ್ಲಾಕ್‌ನ ಪ್ರೀತಮ್ ಶೆಟ್ಟಿ (34) ಬಂಧಿತ ಆರೋಪಿಗಳು.
ಸೆಪ್ಟೆಂಬರ್ 15ರಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಸೀದಿಗೆ ದೀಪಾಲಂಕಾರವನ್ನು ಮಾಡಲಾಗಿತ್ತು. ರಾತ್ರಿ 9:50ರ ಸುಮಾರಿಗೆ, ಕಿಡಿಗೇಡಿಗಳು ಎರಡು ಬೈಕ್‌ಗಳಲ್ಲಿ ಜನತಾ ಕಾಲೋನಿಯ ಸ್ಮಶಾನದ ಕಡೆಯಿಂದ ಬಂದು, ಮಸೀದಿಯ ಹಿಂಭಾಗದ ಕಿಟಕಿಗಳಿಗೆ ಕಲ್ಲು ತೂರಿ ಹಾನಿ ಮಾಡಿದರು.
ಮಸೀದಿ ಅಧ್ಯಕ್ಷರಾದ ಕೆ.ಹೆಚ್ ಅಬ್ದುಲ್ ರಹಿಮಾನ್ ಅವರು, ಹಿಂದೂ-ಮುಸ್ಲಿಂ ಜನಾಂಗದ ನಡುವೆ ದ್ವೇಷವನ್ನು ಉಂಟುಮಾಡುವ ಉದ್ದೇಶದಿಂದ ಈ ಕೃತ್ಯ ಮಾಡಲಾಗಿದೆ ಎಂದು ದೂರು ನೀಡಿದರು.
ಪೊಲೀಸರು ತನಿಖೆ ಕೈಗೊಂಡು, ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಬಳಿಯ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸಿದರು. ಮೊದಲನೇ ಆರೋಪಿಯಾದ ಭರತ್ ಶೆಟ್ಟಿಯ ಮೇಲೆ 12 ಪ್ರಕರಣಗಳು, ಚೆನ್ನಪ್ಪ ಶಿವಾನಂದ ಚಲವಾದಿ ಅಲಿಯಾಸ್ ಮುತ್ತು ಮೇಲೆ 5 ಪ್ರಕರಣಗಳು, ನಿತಿನ್ ಹಡಪ ಮೇಲೆ 1 ಪ್ರಕರಣ, ಅಣ್ಣಪ್ಪ ಅಲಿಯಾಸ್ ಮನು ಮೇಲೆ 2 ಪ್ರಕರಣಗಳು, ಮತ್ತು ಪ್ರೀತಮ್ ಶೆಟ್ಟಿಯ ಮೇಲೆ 2 ಪ್ರಕರಣಗಳು ದಾಖಲಾಗಿವೆ. ಆರೋಪಿಗಳಿಂದ 1 ಸ್ವಿಫ್ಟ್ ಕಾರು, 2 ಬೈಕು ಮತ್ತು 4 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.