ಮಂಗಳೂರು : ಪೊಡವಿಗೊಡೆಯ ಉಡುಪಿಯ ಕೃಷ್ಣನಿಗೆ ಕೃಷ್ಣಾಷ್ಟಮಿಗೆ ನೂರಾರು ಬಗೆಯ ಭಕ್ಷ್ಯಗಳನ್ನು ನೈವೇದ್ಯವಿಡುವುದು ಪ್ರತೀತಿ. ಇಷ್ಟೊಂದು ವೈವಿಧ್ಯಮಯ ತಿಂಡಿಗಳನ್ನು ಮನೆಯಲ್ಲಿ ಮಾಡಿ ಬಡಿಸೋದು ವಿರಳ. ಆದರೆ ಮಂಗಳೂರಿನಲ್ಲೊಬ್ಬ ಕೃಷ್ಣಭಕ್ತೆ ಈ ಬಾರಿ 116ಬಗೆಯ ಭಕ್ಷ್ಯಗಳನ್ನು ನೈವೇದ್ಯವಾಗಿ ಬಡಿಸಿ ಕೃಷ್ಣ ಪ್ರೀತಿ ಮೆರೆದಿದ್ದಾರೆ.
ಹೌದು… ಮಂಗಳೂರಿನ ರಥಬೀದಿಯಲ್ಲಿರುವ ಚಂದ್ರಮತಿ ಎಸ್. ರಾವ್‌ರವರೇ ಕೃಷ್ಣನಿಗೆ ಇಷ್ಟೊಂದು ಬಗೆಯ ನೈವೇದ್ಯ ಬಡಿಸಿದವರು. 66ವರ್ಷದ ಇವರು ಪ್ರತೀವರ್ಷವೂ ಶಕ್ತ್ಯನುಸಾರ ನೂರಾರು ಬಗೆಯ ನೈವೇದ್ಯಗಳನ್ನು ಕೃಷ್ಣನಿಗೆ ಬಡಿಸುತ್ತಾರೆ. ಅದರಂತೆ ಈ ಬಾರಿ ವೈವಿದ್ಯಮಯ ಉಂಡೆ, ಚಕ್ಕುಲಿ, ಕರ್ಜಿಕಾಯಿ, ಚಿರೋಟಿ, ಪೂರಿ, ಜಾಮೂನ್, ಹಲ್ವಾ, ಬಾದುಷಾ, ಬರ್ಫಿ, ಕಜ್ಜಾಯ, ಪಂಚಕಜ್ಜಾಯ, ಚೂಡಾ, ಚಿಪ್ಸ್ ಎಂದು 116ಬಗೆಯ ನೈವೇದ್ಯ ಬಡಿಸಿದ್ದಾರೆ. ವಾರಗಳಿಂದಲೇ ತಯಾರಿ ಆರಂಭಿಸುವ ಇವರು, ಮಡಿಯಲ್ಲಿದ್ದು, ಶುದ್ಧಾಚಾರಣೆಯಿಂದಲೇ ಈ ನೈವೇದ್ಯಗಳನ್ನು ತಯಾರಿಸುತ್ತಾರೆ.
ಅಷ್ಟಮಿಯ ದಿನ ರಾತ್ರಿ ಕೃಷ್ಣನಿಗೆ ಈ ನೈವೇದ್ಯ ಬಡಿಸುತ್ತಾರೆ. ಹೆಚ್ಚಿನ ಭಕ್ಷ್ಯಗಳನ್ನು ಸ್ವಲ್ಪವೇ ಮಾಡಲಾಗುತ್ತದೆ. ಆದರೆ ಬಹಳಷ್ಟು ಮಂದಿಗೆ ಅವರು ಅಷ್ಟಮಿಯ ಪ್ರಸಾದ ಹಂಚುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ಆದ್ದರಿಂದ ಸುಮಾರು ಏಳೆಂಟು ಬಗೆಯ ಭಕ್ಷ್ಯಗಳನ್ನು ಹೆಚ್ಚಿಗೆ ಮಾಡಿ ಅದನ್ನು ಹಂಚುತ್ತಾರೆ. ಈ ವಯಸ್ಸಿನಲ್ಲೂ ಇಷ್ಟೊಂದು ಬಗೆಯ ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯವಾಗಿ ಬಡಿಸುವ ಚಂದ್ರಮತಿಯವರ ಕೃಷ್ಣಪ್ರೀತಿಗೆ ಶರಣು ಶರಣೆನ್ನಲೇಬೇಕು.