Monday, July 7, 2025
Banner
Banner
Banner
Home » ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

by NewsDesk

ಉಡುಪಿ : ಖ್ಯಾತ ವಿದ್ವಾಂಸ, ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ತಮ್ಮ ಮಾತಪಿತರ ಸ್ಮರಣಾರ್ಥ ಯಕ್ಷಗಾನ ಕಲಾರಂಗದ ಮೂಲಕ ಕೊಡ ಮಾಡುವ ಪ್ರತಿಷ್ಠಿತ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿಯನ್ನು ಶುಕ್ರವಾರ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಖ್ಯಾತ ವಿದ್ವಾಂಸ, ಚಿಂತಕ ಲಕ್ಷ್ಮೀಶ ತೋಳ್ಪಾಡಿ, ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟಿನ ಟ್ರಸ್ಟಿ ಗಿರಿಜಾ ಶಿವರಾಮ ಶೆಟ್ಟಿ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗoಗಾಧರ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಪ್ರಯೋಜಿತ ಈ ಪ್ರಶಸ್ತಿಯು 60 ಸಾವಿರ ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಅವರು ಅಭಿನಂದನೀಯ ನುಡಿಗಳನ್ನಾಡಿ, ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ಭಾರತೀಯ ಸಂಸ್ಕೃತಿ, ಪರಂಪರೆ ಬಗ್ಗೆ ಅಪಾರ ಜ್ಞಾನವಿದೆ. ಅವರು ಯಕ್ಷಗಾನದಲ್ಲಿ ಅನೇಕ ಪ್ರಯೋಗಗಳನ್ನು ಕೂಡಾ ಮಾಡಿದ್ದಾರೆ. ಸ್ವಆಸಕ್ತಿಯಿಂದ ಯಕ್ಷಗಾನವನ್ನು ಅಧ್ಯಯನ ಮಾಡಿದವರು. ಅನೇಕ ಅದ್ಭುತ ಕೃತಿಗಳನ್ನು ರಚಿಸಿದ್ದಾರೆ. ಅವರ ಮಾಡಿರುವ ಉಪನ್ಯಾಸಗಳು ಮಾರ್ಗದರ್ಶಕವಾಗಿವೆ, ಆತ್ಮ ಸಂಸ್ಕಾರವನ್ನು ಬೆಳೆಸುತ್ತವೆ. ಡಾ.ಗಣೇಶ್ ಅವರ ಸಾರಸ್ವತ ಸೇವೆಗೆ ಅವರನ್ನು ತಾರಾ (ಸ್ಟಾರ್) ಗಣೇಶ್ ಎಂದು ಕರೆಯುವುದು ಸೂಕ್ತ ಎಂದು ಅಭಿನಂದಿಸಿದರು.

ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಶತಾವಧಾನಿ ಡಾ.ಆರ್.ಗಣೇಶ್, ಯಕ್ಷಗಾನದಲ್ಲಿ ತನ್ನದು ಉತ್ಸಾಹ ಪ್ರಚಾರ. ಇದು ಯಕ್ಷಗಾನ ಲೋಕದಿಂದ ತನಗೆ ನೀಡಲಾದ 4ನೇ ಪ್ರಶಸ್ತಿಯಾಗಿದೆ. ಯಕ್ಷಗಾನಕ್ಕಿಂತಲೂ ತಾನು ಹೆಚ್ಚು ತೊಡಗಿಸಿಕೊಂಡದ್ದು ನಾಟ್ಯ ಕಲೆಯಲ್ಲಿ. ತನಗೆ ಕಳೆದ 37 ವರ್ಷಗಳಿಂದ ದಕ್ಷಿಣೋತ್ತರ ರಾಜ್ಯಗಳಿಂದ ಸಿಕ್ಕಿದ ಮನ್ನಣೆ ಅಭೂತಪೂರ್ವವಾಗಿದೆ. ಯಕ್ಷಗಾನದ ಜಗತ್ತು ಬಹಳ ವಿಸ್ತಾರವಾಗಿದೆ. ನಮ್ಮ ದೇಶದ ಸಾಧನೆ, ಕಲೆಗಳ ಬಗ್ಗೆ ಪ್ರೀತಿ ಬೆಳೆಯಬೇಕು. ಗದ್ಯ, ಪದ್ಯ, ಗೀತಾ ಈ ಮೂರು ಬಗೆ ಯಕ್ಷಗಾನದಲ್ಲಿದೆ. ಯಕ್ಷಗಾನ ಕಲೆಯ ಬಗ್ಗೆ ಇನ್ನಷ್ಟು ಸಂಶೋಧನೆ, ಸಾಹಿತ್ಯಗಳು ಹೊರ ಬರಲಿ ಎಂದು ಹಾರೈಸಿದರು.

ಪ್ರಶಸ್ತಿಯ ರೂವಾರಿ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ಯಕ್ಷಗಾನ ಕಲಾರಂಗದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಕಲಾವಿದರನ್ನು ಗುರುತಿಸಿ ಸನ್ಮಾನಿಸುವ ಚಿಂತನೆ ಮೂಡಿತು. ನಮ್ಮ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಮೂಲಕ ಈ ಕಲಾಸೇವೆಯನ್ನು ಮಾಡಿಕೊಂಡು ಬಂದಿದ್ದೇನೆ. ತನ್ನ ತಂದೆತಾಯಿಯ ಹೆಸರಲ್ಲಿ ಈ ಪ್ರಶಸ್ತಿಯನ್ನು ಶತಾವಧಾನಿ ಡಾ.ಗಣೇಶ್ ಅವರಂತಹ ವಿದ್ವಾಂಸರಿಗೆ ನೀಡುತ್ತಿರುವುದು ಸಂತೋಷ ತಂದಿದೆ. ಯಕ್ಷಗಾನದ ಇನ್ನೊಂದು ಪ್ರಕಾರವಾದ ಮೂಡಲಪಾಯಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು ಎಂದರು.

ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿ, ಶತಾವಧಾನಿ ಗಣೇಶರಲ್ಲಿ ಕಲೆಯ ಜಡತ್ವವಿಲ್ಲ. ಶಾಸ್ತ್ರಜ್ಞ ಹಾಗೂ ಕಲೆಯ ಮನೋಧರ್ಮ ಒಟ್ಟಿಗೆ ಇರುವುದು ಅಪರೂಪ ಅದು ಡಾ. ಗಣೇಶರಲ್ಲಿದೆ. ಹೀಗಾಗಿ ಅವರಲ್ಲಿ ಜಡತ್ವವಿಲ್ಲ. ನಟನೇ ಮತ್ತು ನಿಜ ಎರಡೂ ಏಕಕಾಲದಲ್ಲಿ ಸಾಧಿಸುವ ವಕ್ತಾರರಾಗಿದ್ದಾರೆ ಎಂದ ಅವರು. ಯಕ್ಷಗಾನದ ಮೇಲೆ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಲು ವಿದ್ವಾಂಸರ ಜೊತೆಗೆ ಸಂವಾದ ಕಾರ್ಯಕ್ರಮ ನಡೆಯಲಿ. ಈ ಮೂಲಕ ಪ್ರಶ್ನೆಗಳಿಗೆ ಉತ್ತರ ಸಿಗಲಿ ಎಂದರು.

ಕಾರ್ಯಕ್ರಮದಲ್ಲಿ ಪವನ್‌ಕಿರಣ್ ಕೆರೆ ಶಿಬಿರದ ಮಾರ್ಗದರ್ಶಿ, ಯಕ್ಷಗಾನ ಕಲಾರಂಗದ ಪದಾಧಿಕಾರಿಗಳಾದ ಎಸ್. ವಿ. ಭಟ್., ಸದಾಶಿವ ರಾವ್, ಯಕ್ಷಗಾನ ಮೇಳದ ಯಜಮಾನ ಪಳ್ಳಿ ಕಿಶನ್ ಹೆಗ್ಡೆ ಉಪಸ್ಥಿತರಿದ್ದರು.

ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿ ಎಂ. ನಾರಾಯಣ ಹೆಗಡೆ ವಂದಿಸಿದರು.

You may also like

Leave a Comment

Maax-Media-Logo

Maax News covers major news and events of Udupi district. This channel provides detailed reports on the political, social, economic, and cultural life of Udupi district.

Maax News, equipped with the most sophisticated studio in Udupi, assures people comprehensive news coverage.

Copyrights © maaxmedia.in All Rights Reserved. Designed by Sabweb