ಮಂಗಳೂರು : ಅಂಗಡಿಗೆ ಬಂದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌ಸಿ-1) 5ವರ್ಷಗಳ ಶಿಕ್ಷೆ ವಿಧಿಸಿ ಶನಿವಾರದಂದು ತೀರ್ಪು ನೀಡಿದ್ದಾರೆ.
ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಅಬ್ದುಲ್ ಅಶ್ರಫ್(42) ಶಿಕ್ಷೆಗೊಳಗಾದ ಅಪರಾಧಿ.
2024ರ ಆ.11ರಂದು ಅಬ್ದುಲ್ ಅಶ್ರಫ್ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕುದ್ದುಪದವಿನಲ್ಲಿರುವ ತನ್ನ ಅಂಗಡಿಗೆ ಬಂದಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ. ಅಂಗಡಿಯಿoದ ಬಂದ ಬಾಲಕಿ ಮನೆಯಲ್ಲಿ ಮಂಕಾಗಿ ಕುಳಿತಿದ್ದಳು. ಈ ಬಗ್ಗೆ ತಾಯಿ ಪ್ರಶ್ನಿಸಿದಾಗ ಲೈಂಗಿಕ ಕಿರುಕುಳದ ವಿಚಾರ ತಿಳಿಸಿದ್ದಳು. ಆದ್ದರಿಂದ ಬಾಲಕಿಯ ತಾಯಿ ನೀಡಿದ ದೂರಿನಂತೆ ಆ.12ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಟ್ಲ ಠಾಣಾ ಪಿಎಸ್‌ಐ ರತನ್ ಕುಮಾರ್ ಎಂ ತನಿಖೆ ನಡೆಸಿ ಅಬ್ದುಲ್ ಅಶ್ರಫ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ವಿನಯ್ ದೇವರಾಜ್ ಅವರು ಆರೋಪಿಯ ಮೇಲಿನ ಆರೋಪ ಸಾಬೀತಾಗಿರುವುದಾಗಿ ತೀರ್ಮಾನಿಸಿ ಐದು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಅಲ್ಲದೆ ನೊಂದ ಬಾಲಕಿಗೆ 1ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶ ನೀಡಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದ ಮಂಡಿಸಿದ್ದರು.