ಉಡುಪಿ : ಪರ್ಯಾಯ ಶ್ರೀಕೃಷ್ಣ ಮಠ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆಗಸ್ಟ್ 1ರಿಂದ ಆರಂಭಗೊಂಡ ವೈಭವದ ಶ್ರೀಕೃಷ್ಣ ಮಾಸೋತ್ಸವ ಸೆಪ್ಟೆಂಬರ್ 1ರಂದು ಸಮಾಪನಗೊಳ್ಳಲಿದೆ. ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರೊಡಗೂಡಿ ನಡೆದ ಈ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡಿದ್ದು, ಸಮಾರೋಪ ಸಮಾರಂಭ ಅಂಗವಾಗಿ ಶ್ರೀಕೃಷ್ಣನಿಗೆ ಸೆ.1ರಂದು ಉದಯಾಸ್ತಮಾನ ಸೇವೆ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಪರಿಷತ್ ಉಡುಪಿ ವಲಯ ಹಾಗೂ ಪಡುಬಿದ್ರಿ ತರಂಗಿಣಿ ಮಿತ್ರ ಮಂಡಳಿ ವತಿಯಿಂದ ಲಕ್ಷ ತುಳಸಿ ಅರ್ಚನೆ ಹಾಗೂ ಶ್ರೀ ವಿಷ್ಣು ಸಹಸ್ರ ನಾಮಾವಳಿ ಪಠಣ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಾರೆಗಮಪ ಸೀಸನ್ 15ರ ರನ್ನರ್ ಅಪ್ ಕಲಾವಿದೆ ವಿದುಷಿ ಸಾಧ್ವಿನಿ ಕೊಪ್ಪ ಅವರಿಂದ ಬೆಳಿಗ್ಗೆ 10ರಿಂದ 12ರವರೆಗೆ ಶಾಸ್ತ್ರೀಯ ಸಂಗೀತ ಕಛೇರಿ ಆಯೋಜಿಸಲಾಗಿದೆ. ಅಪರಾಹ್ನ 3ರಿಂದ 5ರ ವರೆಗೆ ಸಂಯುಕ್ತ ಸಂಸ್ಥಾನ (ಯು.ಕೆ) ನೃತ್ಯ ನಿರ್ದೇಶಕಿ ದಿವ್ಯಾ ಭಟ್ ಅವರಿಂದ ಕಥಕ್ ನೃತ್ಯ ಹಾಗೂ ರಾತ್ರಿ 7ರಿಂದ 9ರವರೆಗೆ ಸ್ವೀಡನ್ ನ ವಿದುಷಿ ದಿವ್ಯಾ ಸುರೇಶ್ ಅವರಿಂದ ಭರತ ನಾಟ್ಯ ಪ್ರದರ್ಶನವಿದೆ ಎಂದು ಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ಕಾರ್ಯದರ್ಶಿ ಪ್ರಸನ್ನಾಚಾರ್ಯ ತಿಳಿಸಿದ್ದಾರೆ.