ಮಂಗಳೂರು : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ಸೆ.15ರಂದು ರವಿವಾರ ಬೆಳಗ್ಗೆ 9ರಂದು ಬೀದರ್‌ನಿಂದ ಚಾಮರಾಜ ನಗರದವರೆಗೆ ಐತಿಹಾಸಿಕ ಮಾನವ ಸರಪಳಿ ನಿರ್ಮಿಸಿ ಗಿನ್ನಿಸ್ ದಾಖಲೆ ಸೃಷ್ಟಿಸಲು ಯೋಜನೆಯನ್ನು ಸರ್ಕಾರದಿಂದ ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಂದು ದ.ಕ.ಜಿಲ್ಲೆಯ ಮುಲ್ಕಿಯ ಹೆಜಮಾಡಿ ಟೋಲ್‍ಗೇಟ್‌ನಿಂದ ಸುಳ್ಯದ ಸಂಪಾಜೆ ಗೇಟ್‌ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ 130 ಕಿ.ಮೀವರೆಗೆ ಬೃಹತ್ ಮಾನವ ಸರಪಳಿ ನಿರ್ಮಿಸಲಾಗುತ್ತದೆ.
ಈ ಮಾನವ ಸರಪಳಿಗೆ ಅಕ್ಷರ ಸಂತ ಹರೇಕಳ ಹಾಜಬ್ಬ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. 1ಲಕ್ಷಕ್ಕೂ ಅಧಿಕ ಮಂದಿಯಿಂದ ಈ ಮಾನವ ಸರಪಳಿ ನಿರ್ಮಾಣಗೊಳ್ಳಲಿದೆ. ಹೆದ್ದಾರಿ ಉದ್ದಕ್ಕೂ ಮಾನವ ಸರಪಳಿ ರಚಿಸಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಸರ್ಕಾರೇತರ ಸಂಸ್ಥೆಗಳು, ಸಾರ್ವಜನಿಕ ವಲಯ ಉದ್ಯಮಗಳು, ಖಾಸಗಿ ವಲಯ, ನಾಗರೀಕ ಸಮಾಜ ಮತ್ತು ವಿಶೇಷವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸಂಘಸಂಸ್ಥೆಗಳು, ಗ್ರಾಪಂ ಅಥವಾ ನಗರ ಸ್ಥಳೀಯ ಸಂಸ್ಥೆಗಳು, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಸಾರ್ವಜನಿಕರು, ಸ್ವಸಹಾಯ ಸಂಘಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಇಲಾಖೆಗಳ ಅಧಿಕಾರಿ ಸಿಬ್ಬಂದಿ ಕೈಜೋಡಿಸಲಿದ್ದಾರೆ.
ಮಾನವ ಸರಪಳಿ ಹಾದುಹೋಗುವ ಹೆದ್ದಾರಿ ಉದ್ದಕ್ಕೂ ಪ್ರತಿ 100 ಮೀಟರ್‌ಗೊಬ್ಬರಂತೆ – ವಿಭಾಗ ಅಧಿಕಾರಿ, ಪ್ರತೀ ಕಿ.ಮೀ.ಗೊಬ್ಬರಂತೆ ಪ್ರದೇಶ ಅಧಿಕಾರಿ, ಪ್ರತಿ 5 ಕಿ.ಮೀ.ಗೊಬ್ಬರಂತೆ ತಾಲೂಕು ಅಧಿಕಾರಿಯವರನ್ನು ನೇಮಿಸಲಾಗುತ್ತದೆ. ಅಲ್ಲದೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮಾನವ ಸರಪಳಿ ರಚನೆಯ ಜೊತೆಗೆ ಜಿಲ್ಲೆಯಾದ್ಯಂತ ಗಿಡನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.