ಉಡುಪಿ : ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ 2024 ಮಂಡನೆಯನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ದೇಶಾದ್ಯಂತ ಪ್ರತಿಭಟನೆಯ ಅಂಗವಾಗಿ ಎಸ್‌ಡಿಪಿಐ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ವಕ್ಫ್ ತಿದ್ದುಪಡಿ ಮಸೂದೆಯ ಪ್ರತಿಯನ್ನು ಹರಿಯುವ ಮೂಲಕ ಪ್ರತಿಭಟನೆಯನ್ನು ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಎಸ್‌ಡಿಪಿಐ ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಹನೀಫ್ ಮೂಳೂರ್ ಮಾತನಾಡಿ, ವಕ್ಫ್ ತಿದ್ದುಪಡಿ ಕಾಯ್ದೆ ಅಸಂವಿಧಾನಿಕ ಹಾಗೂ ಮುಸ್ಲಿಂ ವಿರೋಧಿಯಾಗಿದ್ದು ಅದನ್ನು ಎಸ್‌ಡಿಪಿಐ ವಿರೋದಿಸುತ್ತದೆ ಎಂದು ಹೇಳಿದರು. ಎಸ್‌ಡಿಪಿಐ ಉಡುಪಿ ಕ್ಷೇತ್ರ ಸಮಿತಿ ಉಪಾಧ್ಯಕ್ಷ ರಹೀಮ್ ಆದಿಉಡುಪಿ ಮಾತನಾಡಿ, ಯಾವುದೇ ಕಾರಣಕ್ಕೂ ಈ ಕಾಯ್ದೆಯನ್ನು ಜಾರಿಗೆ ತರಲು ನಾವು ಬಿಡುವುದಿಲ್ಲ.
ಒಂದು ವೇಳೆ ಕೇಂದ್ರ ಸರಕಾರ ಈ ಕಾಯ್ದೆಯನ್ನ ವಾಪಸ್ ಪಡೆಯದೆ ಇದ್ದರೆ CAA-NRC ಮಾದರಿಯಲ್ಲಿ ಜನಾಂದೋಲನವನ್ನು ನಡೆಸಬೇಕಾಗುತ್ತದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಆಸಿಫ್ ಕೋಟೇಶ್ವರ, ಜಿಲ್ಲಾ ಉಪಾಧ್ಯಕ್ಷ ನಝೀರ್ ಅಹಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಹಾಗೂ ಮತ್ತಿತರು ಉಪಸ್ಥಿತರಿದ್ದರು.