ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ಹಳೆಯ ಪಾರಮ್ಯ ಮುಂದುವರಿಸಿದೆ. ಕಮಲ ಪಾಳಯದ ಭದ್ರಕೋಟೆಯಲ್ಲಿ ಬಿಜೆಪಿ ಮತ್ತೊಮ್ಮೆ ಗೆಲುವಿನ ನಗೆ ಬೀರಿದೆ. ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ ಎದುರು ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ಬಿಗಿದ್ದಾರೆ.
ಹೌದು…. ಬಿಜೆಪಿ ಭದ್ರಕೋಟೆಯಲ್ಲಿ ಕಮಲ ಮತ್ತೊಮ್ಮೆ ಅರಳಿದೆ. ಇಂದು ಉಡುಪಿಯ ಸೈಂಟ್ ಸಿಸಿಲೀಸ್ ಶಾಲೆಯಲ್ಲಿ ಮತದಾನ ಆರಂಭವಾದಾಗ ಅಂಚೆ ಮತಗಳಿಂದ ಹಿಡಿದು ಪ್ರತಿ ಸುತ್ತಿನಲ್ಲೂ ಕೂಡ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಮುನ್ನಡೆಯನ್ನು ಕಾಯ್ದುಕೊಂಡು ಬಂದರು. ಯಾವುದೇ ಸುತ್ತಿನಲ್ಲೂ ಕೂಡ ಹಿನ್ನಡೆಗೆ ಅವಕಾಶ ಕೊಡದೆ ಒಂದೇ ಸಮನೆ ಮುನ್ನಡೆ ಕಾಯ್ದುಕೊಂಡು ಬಂದು ಕೊನೆಗೆ ಎರಡೂವರೆ ಲಕ್ಷಕ್ಕೂ ಅಧಿಕ ಮತಗಳಿಂದ ಕೋಟ ಶ್ರೀನಿವಾಸ್ ಪೂಜಾರಿ ಗೆಲುವಿನ ನಗೆ ಬೀರಿದ್ದಾರೆ. ಬಳಿಕ ಮಾತನಾಡಿದ ಅವರು, ಈ ಗೆಲುವನ್ನು ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳಿಗೆ ಸಮರ್ಪಿಸುತ್ತಿದ್ದೇನೆ. ನರೇಂದ್ರ ಮೋದಿ ಅವರ ಪರ ಜನರು ಮತ್ತೊಮ್ಮೆ ಜನಾದೇಶ ನೀಡಿದ್ದಾರೆ. ಕರ್ನಾಟಕದಲ್ಲಿ ಕೂಡ ನಮ್ಮ ನಿರೀಕ್ಷೆಯಷ್ಟು ಅಲ್ಲದಿದ್ದರೂ ಹೆಚ್ಚಿನ ಸೀಟುಗಳನ್ನು ಗೆದ್ದಿದ್ದೇವೆ. ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೊಂದೆಡೆ ಪ್ರತಿ ಸುತ್ತಿನಲ್ಲೂ ಕೂಡ ಮುನ್ನಡೆ ಸಿಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಕುಣಿದು ಕೊಪ್ಪಳಿಸಿದರು. ಮತ ಎಣಿಕೆ ಕೇಂದ್ರದ ಹೊರಗಡೆ ಗೆಲುವಿನ ಕೇಕೆ ಹಾಕಿ ಸಂಭ್ರಮಾಚರಣೆ ನಡೆಸಿದರು.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಇದ್ದು ಯಾರೇ ಗೆದ್ದರೂ ಕೂಡ 50,000 ಮತಗಳ ಲೀಡ್ ಮೀರುವುದಿಲ್ಲ ಎಂಬ ವಾತಾವರಣ ಚುನಾವಣೆ ಸಂದರ್ಭದಲ್ಲಿ ಇತ್ತು. ಆದರೆ ಅದನ್ನೆಲ್ಲ ಸುಳ್ಳು ಮಾಡಿರುವ ಕೋಟ ಶ್ರೀನಿವಾಸ್ ಪೂಜಾರಿ ಅತ್ಯಧಿಕ ಎರಡೂವರೆ ಲಕ್ಷಕ್ಕೂ ಮಿಕ್ಕಿ ಮತಗಳಿಂದ ಗೆದ್ದು ಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡಿದ್ದಾರೆ.