ವಿಟ್ಲ : ವಿಟ್ಲದ ಖಾಸಗಿ ಬಸ್‌ಸ್ಟ್ಯಾಂಡ್ ಹಿಂಬದಿಯ ಪಾಳುಬಿದ್ದ ಕೆರೆಯಲ್ಲಿ ಪುರುಷನ ಮೃತದೇಹದ ಅವಶೇಷಗಳು ಪತ್ತೆಯಾಗಿರುವ ಘಟನೆ ನಿನ್ನೆ ನಡೆದಿದೆ.

ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳಕ್ಕೆ ವಿಧಿ ವಿಜ್ಞಾನ ತಂಡದ ಅಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಅವಶೇಷಗಳನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿತ್ತು.
ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾದ ವ್ಯಕ್ತಿಗಳ ಕುಟುಂಬಸ್ಥರನ್ನು ದೇರಳಕಟ್ಟೆ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಯ ನಂತರ ಇದೀಗ ವ್ಯಕ್ತಿಯ ಅವಷೇಶದ ಗುರುತು ಪತ್ತೆಹಚ್ಚಲಾಗಿದೆ.
ಪತ್ತೆಯಾದ ಮೃತದೇಹದ ಅವಶೇಷವನ್ನು ಆರು ತಿಂಗಳ ಹಿಂದೆ ನವರಾತ್ರಿ ಹಬ್ಬದ ಸಂದರ್ಭ ವೇಷ ಹಾಕಲು ಪರವಾನಿಗೆ ಪಡೆಯಲೆಂದು ಮನೆಯವರಲ್ಲಿ ಹೇಳಿ ಹೋಗಿದ್ದ ವಿಟ್ಲ ಪಳಿಕೆ ನಿವಾಸಿ ಸುಂದರ ನಾಯ್ಕ ಎಂದು ಗುರುತಿಸಲಾಗಿದೆ.
ಮೃತದೇಹದ ಭಾಗಗಳನ್ನು ಕಾನೂನು ಪ್ರಕ್ರಿಯೆಯಂತೆ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಕುಟುಂಬಸ್ಥರಿಗೆ ವೈದ್ಯಾಧಿಕಾರಿಗಳು ಒಪ್ಪಿಸಿದ್ದಾರೆ.