ಉಡುಪಿ : ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾಕ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಇಸ್ಕಾನ್ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ ಇಂದು ಉಡುಪಿಯಲ್ಲಿ ಬೃಹತ್ ಜಾಥಾ ಹಾಗೂ ಪ್ರತಿಭಟನಾ ಸಭೆಯನ್ನು ಹಿಂದೂ ಹಿತರಕ್ಷಣ ಸಮಿತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸಂಚಾಲಕ ರಾಧಾಕೃಷ್ಣ ಮೆಂಡನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಧ್ಯಾಹ್ನ 3ಕ್ಕೆ ಜೋಡುಕಟ್ಟೆಯಿಂದ ಜಾಥಾ ಹೊರಟು, ಸರ್ವಿಸ್ ಬಸ್‌ನಿಲ್ದಾಣ, ಸಿಟಿ ಬಸ್‌ನಿಲ್ದಾಣ, ಕಲ್ಸಂಕ ಮಾರ್ಗವಾಗಿ ಶ್ರೀ ಕೃಷ್ಣಮಠದ ಪಾರ್ಕಿಂಗ್ ಪ್ರದೇಶ ಪ್ರವೇಶಿಸಲಿದೆ.
ಅಲ್ಲಿ ಪ್ರತಿಭಟನಾ ಸಭೆ ನಡೆಯಲಿದ್ದು ಪರ್ಯಾಯ ಪುತ್ತಿಗೆ ಮಠಾಧೀಶರು ಮುಖ್ಯ ಭಾಷಣ ಮಾಡಲಿದ್ದಾರೆ. ಬಿಜೆಪಿ ಸಹಿತವಾಗಿ ವಿವಿಧ ಹಿಂದು ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ. ಉಡುಪಿ ಇಸ್ಕಾನ್‌ನ ಪ್ರಮುಖರು, ಭಕ್ತರು ಭಾಗವಹಿಸಲಿದ್ದಾರೆ.
ಪ್ರತಿಭಟನೆಯ ಅನಂತರ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಿದ್ದೇವೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಸಹಿಸಲು ಸಾಧ್ಯವೇ ಇಲ್ಲ. ಕೇಂದ್ರ ಸರಕಾರ ಇದಕ್ಕೊಂದು ಪರಿಹಾರ ಕಂಡುಹುಡುಕಬೇಕು. ಹಿಂದೂ ಮಹಿಳೆಯರ ಮೇಲೆ ನಿರಂತರ ದಬ್ಟಾಳಿಕೆ ಹಾಗೂ ಅತ್ಯಾಚಾರ ನಡೆಯುತ್ತಿದೆ. ಹಿಂದೂಗಳು ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.