ಉಡುಪಿ : ಕಳೆದ ಐದು ದಿನಗಳಿಂದ ಡಾಂಬರ್‌ನಲ್ಲಿ ಹೂತಿದ್ದ ಶ್ವಾನವನ್ನು ವಿಶುಶೆಟ್ಟಿ ಅಂಬಲಪಾಡಿ, ಹರೀಶ್ ಉದ್ಯಾವರ ಬಹಳ ಶ್ರಮಪಟ್ಟು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ಆದಿಉಡುಪಿ ಸಂತೆ ಮಾರ್ಕೆಟ್ ಬಳಿ ರಸ್ತೆ ಡಾಂಬರ್ ಗೋಡಾನ್‌ನಲ್ಲಿ ಕೆಲವು ಡಬ್ಬಗಳಿಂದ ಡಾಂಬರ್ ಸೋರಿ ಸ್ಥಳದಲ್ಲಿ ಪಸರಿಸಿತ್ತು. ಶ್ವಾನವೊಂದು ಡಾಂಬರ್‌ನಲ್ಲಿ ಬಿದ್ದು ಏಳಲಾರದೆ ಕಳೆದ ಐದು ದಿನಗಳಿಂದ ಒದ್ದಾಡುತ್ತಿತ್ತು. ಮಾಹಿತಿ ಪಡೆದ ವಿಶುಶೆಟ್ಟಿ ಸ್ಥಳಕ್ಕೆ ಹರೀಶ್ ಉದ್ಯಾವರ ಜೊತೆಗೆ ಆಗಮಿಸಿ ಡಬ್ಬಿಗಳ ನಡುವೆ ಡಾಂಬರ್‌ನಲ್ಲಿ ಸಿಲುಕಿದ್ದ ಶ್ವಾನವನ್ನು ಬಹಳ ಪ್ರಯಾಸದಿಂದ ರಕ್ಷಿಸಿದ್ದಾರೆ. ಡಬ್ಬಿಯನ್ನು ವಿಶುಶೆಟ್ಟಿ ವಾಹನಕ್ಕೆ ಕಟ್ಟಿ ಎಳೆದು ತದನಂತರ ತೆಂಗಿನ ಎಣ್ಣೆಯನ್ನು ಸವರಿ ನಾಯಿಯನ್ನು ರಕ್ಷಿಸುವಲ್ಲಿ ಹರೀಶ್ ಉದ್ಯಾವರ ಯಶಸ್ವಿಯಾಗಿದ್ದಾರೆ.
ಡಾಂಬರಿನ ವ್ಯಾಪಾರಿಗಳು ಈ ರೀತಿ ಡಾಂಬರ್ ಸೋರದಂತೆ ಜಾಗ್ರತೆ ವಹಿಸಿ, ಹಾವು ಹಾಗೂ ಮೂಕಪ್ರಾಣಿಗಳಿಗೆ ತೊಂದರೆ ಆಗದಂತೆ ಸಹಕರಿಸಬೇಕೆಂದು ವಿಶುಶೆಟ್ಟಿ ಆಗ್ರಹಿಸಿದ್ದಾರೆ.