ಸುಳ್ಯ : ಮಹಿಳೆಯೊಬ್ಬರು ಶೌಚಾಲಯದಲ್ಲಿ ಇರುವ ವೇಳೆ ವ್ಯಕ್ತಿಯೊಬ್ಬ ಪೋಟೋ ತೆಗೆದು ಪರಾರಿಯಾಗಿರುವ ಘಟನೆ ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಶನಿವಾರ ನಡೆದಿದೆ.
ಶೌಚಾಲಯಕ್ಕೆ ಮಹಿಳೆ ಹೋಗಿದ್ದಾಗ ಹಿಂಬದಿಯಲ್ಲಿರುವ ಕಿಟಕಿಯ ಮೂಲಕ ಫೋಟೋ ತೆಗೆದಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಈ ಭಾಗದ ಕಿಟಕಿಯ ಗ್ಲಾಸ್ ಸರಿದಿದ್ದು, ಸರಿದ ಭಾಗದಿಂದ ಫೋಟೋವನ್ನು ಕ್ಲಿಕ್ಕಿಸಿದ್ದಾನೆ. ಈ ಸಂದರ್ಭ ಮಹಿಳೆ ಜೋರಾಗಿ ಕಿರುಚಿಕೊಂಡಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ.
ಮಹಿಳೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಈ ಬಗ್ಗೆ ಬಸ್ ನಿಲ್ದಾಣದ ಸಿಬ್ಬಂದಿಯನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದು, ಶೌಚಾಲಯದ ಭಾಗದ ಅವ್ಯವಸ್ಥೆಯ ಬಗ್ಗೆ ಶೀಘ್ರವಾಗಿ ಸರಿಪಡಿಸುವಂತೆ ಸೂಚನೆಯನ್ನು ನೀಡಿದ್ದಾರೆ.