Friday, December 27, 2024
Banner
Banner
Banner
Home » “ಪಟ್ಲ ಸತೀಶ್ ಶೆಟ್ಟಿ ಅವರಿಂದ ಯಕ್ಷಗಾನದ ಕಂಪು ವಿಶ್ವಾದ್ಯಂತ ಹರಡಿದೆ” – ಡಾ.ಕೆ.ಪ್ರಕಾಶ್ ಶೆಟ್ಟಿ; ಯಕ್ಷಧ್ರುವ ಪಟ್ಲ ಫೌಂಡೇಶನ್ ದಶಮಾನೋತ್ಸವದ ಸಮಾಲೋಚನಾ ಸಭೆ

“ಪಟ್ಲ ಸತೀಶ್ ಶೆಟ್ಟಿ ಅವರಿಂದ ಯಕ್ಷಗಾನದ ಕಂಪು ವಿಶ್ವಾದ್ಯಂತ ಹರಡಿದೆ” – ಡಾ.ಕೆ.ಪ್ರಕಾಶ್ ಶೆಟ್ಟಿ; ಯಕ್ಷಧ್ರುವ ಪಟ್ಲ ಫೌಂಡೇಶನ್ ದಶಮಾನೋತ್ಸವದ ಸಮಾಲೋಚನಾ ಸಭೆ

by NewsDesk

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ದಶಮಾನೋತ್ಸವದ ಕುರಿತು ಸಮಾಲೋಚನಾ ಸಭೆಯು ನಗರದ ಗೋಲ್ಡ್ ಫಿಂಚ್ ಹೋಟೆಲ್‌ನಲ್ಲಿ ಜರುಗಿತು.

ಸಭೆಯನ್ನು ಉದ್ದೇಶಿಸಿ ಮಾತಾಡಿದ ಎಂ.ಆರ್.ಜಿ. ಗ್ರೂಪ್ ಚೇರ್‌ಮೆನ್ ಡಾ.ಕೆ.ಪ್ರಕಾಶ್ ಶೆಟ್ಟಿ ಅವರು, “ಕರಾವಳಿಗೆ ಮಾತ್ರ ಸೀಮಿತವಾಗಿದ್ದ ಯಕ್ಷಗಾನದ ಕಂಪನ್ನು ದೇಶ ವಿದೇಶಗಳಲ್ಲಿ ಪಸರಿಸುವಂತೆ ಮಾಡಿದ ಕೀರ್ತಿ ಪಟ್ಲ ಸತೀಶ್ ಶೆಟ್ಟಿಯವರದ್ದಾಗಿದೆ. ಯಕ್ಷಗಾನ ಕಲಾವಿದರಿಗೆ ಸದಾ ಬೆಂಬಲ ನೀಡುತ್ತಿರುವ ಪಟ್ಲರ ಕಾರ್ಯಕ್ರಮಕ್ಕೆ ನಾವೆಲ್ಲರೂ ಸಹಾಯ ಸಹಕಾರ ನೀಡಬೇಕು. ಜೂನ್ 1ರಂದು ನಡೆಯಲಿರುವ ದಶಮಾನೋತ್ಸವ ಕಾರ್ಯಕ್ರಮ ಅವಿಸ್ಮರಣೀಯವಾಗಿಸಲು ನಾವೆಲ್ಲರೂ ಒಗ್ಗೂಡಿ ದುಡಿಯಬೇಕು“ ಎಂದರು.

ಟ್ರಸ್ಟ್‌ನ ಮಹಾದಾನಿ, ಮುಂಬೈನ ಹೇರಂಭ ಇಂಡಸ್ಟ್ರಿಸ್ ಕಾರ್ಯ ನಿರ್ವಹಣಾಧಿಕಾರಿ ಕನ್ಯಾನ ಸದಾಶಿವ ಶೆಟ್ಟಿ ಮಾತಾಡಿ, “ನೂರಾರು ವರ್ಷಗಳ ಇತಿಹಾಸವಿರುವ ಯಕ್ಷಗಾನ ಕಲೆಗೆ ಕಳೆದ 10 ವರ್ಷಗಳಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾನಮಾನವನ್ನು ನೀಡಿದೆ. ನಮ್ಮೆಲ್ಲರನ್ನು ಒಗ್ಗೂಡಿಸಿಕೊಂಡು ಭಾಗವತ ಪಟ್ಲರು ಪ್ರತೀವರ್ಷ ಕಲಾವಿದರ ನೆರವಿಗಾಗಿ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಈ ಬಾರಿಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ಪ್ರತ್ಯೇಕ ಕಮಿಟಿ ರಚಿಸಿಕೊಂಡು ಕೆಲಸ ಮಾಡಬೇಕು. ಈಗಿನ 9 ವರ್ಷಗಳಲ್ಲಿ ಮಾಡಿರುವ ಶ್ಲಾಘನೀಯ ಕಾರ್ಯ ಮುಂದೆಯೂ ನಡೆಯಲಿ“ ಎಂದರು.

ಪ್ರಾಸ್ತಾವಿಕ ಮಾತನ್ನಾಡಿದ ಟ್ರಸ್ಟ್ ಪ್ರಧಾನ ಸಂಚಾಲಕ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, “ಪಟ್ಲ ಫೌಂಡೇಶನ್‌ನ ಕಳೆದ 9 ವರ್ಷಗಳ ಕಾರ್ಯಕ್ರಮಗಳಲ್ಲಿ ನಾನು ಪಾಲ್ಗೊಂಡಿದ್ದೇನೆ. ನನಗೆ ಕಟೀಲು ದೇವಿ ನೀಡಿರುವ ಅನುಗ್ರಹದಿಂದ ಸಾಧ್ಯವಾಗಿದೆ. ಸಮಾಜದ ಬಡವರ, ನೊಂದವರ ನೆರವಿಗಾಗಿ ಕಟೀಲು ಕ್ಷೇತ್ರದಲ್ಲಿ 9 ವರ್ಷಗಳ ಹಿಂದೆ ಪಟ್ಲ ಫೌಂಡೇಶನ್ ಸ್ಥಾಪನೆಯಾಯಿತು. ಕೇವಲ ಯಕ್ಷಗಾನ ಕಲಾವಿದರ ಹಿತರಕ್ಷಣೆಗಾಗಿ ಪ್ರಾರಂಭವಾಗಿದ್ದ ಈ ಸಂಘಟನೆಯು ಇಂದು ಸಮಾಜದ ಎಲ್ಲ ವರ್ಗದ ಜನರ ಕಣ್ಣೀರು ಒರೆಸುವಲ್ಲಿ ಯಶಸ್ವಿಯಾಗಿದೆ. ಟ್ರಸ್ಟ್ ದಶಮಾನೋತ್ಸವ ಕಾರ್ಯಕ್ರಮ ವಿಭಿನ್ನ ರೀತಿಯಲ್ಲಿ ನಡೆಯಬೇಕು. ಜನಮಾನಸದಲ್ಲಿ ಮರೆಯದ ರೀತಿಯಲ್ಲಿ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿಸಬೇಕು“ ಎಂದರು.

ಟ್ರಸ್ಟ್ ನ ಪ್ರಧಾನ ಸಂಚಾಲಕ ಶಶಿಧರ್ ಶೆಟ್ಟಿ ಬರೋಡ ಮಾತಾಡಿ, “ಪಟ್ಲ ಸತೀಶ್ ಶೆಟ್ಟಿಯವರು ಬಹಳಷ್ಟು ಕಷ್ಟಪಟ್ಟು ಯಕ್ಷಗಾನ ಕಲಾವಿದರಿಗಾಗಿ ಸಂಘಟನೆ ಕಟ್ಟಿದ್ದು ಅದೀಗ ದಶಮಾನೋತ್ಸವದ ಸಂಭ್ರಮದಲ್ಲಿದೆ. ಈ ಬಾರಿ ದಾನಿಗಳ ನೆರವಿನಿಂದ 10 ಕೋಟಿ ರೂ. ಒಟ್ಟುಮಾಡಿ ಅದನ್ನು ಎಫ್ ಡಿ ಇಟ್ಟು ಅದರಿಂದ ಬರುವ ಬಡ್ಡಿಯಲ್ಲಿ ಪ್ರತೀವರ್ಷ ಕಲಾವಿದರ ಅಭ್ಯುದಯಕ್ಕಾಗಿ ಕಾರ್ಯಕ್ರಮ ಆಯೋಜಿಸುವಂತಾಗಬೇಕು. ಇದಕ್ಕಾಗಿ ದಾನಿಗಳು ಒಂದೇ ಮನಸ್ಸಿನಿಂದ ಕೆಲಸ ಮಾಡಬೇಕು ಎಂದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಸ್ಥಾಪಕ ಪಟ್ಲ ಸತೀಶ್ ಶೆಟ್ಟಿಯವರು ಮಾತಾಡಿ, “ದಾನಿಗಳು ನೀಡಿರುವ ಸಹಕಾರದಿಂದ ನಮ್ಮ ಟ್ರಸ್ಟ್ ಯಶಸ್ವಿಯಾಗಿ ನಡೆಯುತ್ತಿದೆ. ಪಟ್ಲ ಟ್ರಸ್ಟ್‌ನ ಯಕ್ಷ ಶಿಕ್ಷಣ ಅಭಿಯಾನದಡಿಯಲ್ಲಿ 6 ಜಿಲ್ಲೆಗಳ ಮಕ್ಕಳಿಗೆ ಕಳೆದ 4 ವರ್ಷಗಳಲ್ಲಿ ಸುಮಾರು 9000 ಮಕ್ಕಳಿಗೆ ಯಕ್ಷ ಶಿಕ್ಷಣ ನೀಡುತ್ತಿದೆ. ಇದೇ ತಿಂಗಳ 31ರಂದು 21 ಶಾಲೆಗಳ ಒಟ್ಟು 929 ಮಕ್ಕಳು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಒಡ್ಡೂರು ಫಾರ್ಮ್‌ನಲ್ಲಿ ಯಕ್ಷಗಾನ ರಂಗಪ್ರವೇಶ ಮಾಡಲಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ. ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಲಿದ್ದಾರೆ“ ಎಂದರು.

ಟ್ರಸ್ಟ್‌ನ ಪುರುಷೋತ್ತಮ ಭಂಡಾರಿ ಅವರು ಮಾತಾಡಿ, “ಪಟ್ಲ ಫೌಂಡೇಶನ್ 9 ವರ್ಷಗಳಲ್ಲಿ ಟ್ರಸ್ಟ್ 15 ಕೋಟಿ ರೂ. ನಷ್ಟು ಹಣವನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗ ಮಾಡಿದೆ. ಕನ್ಯಾನ ಸದಾಶಿವ ಶೆಟ್ಟಿಯವರು ಟ್ರಸ್ಟ್ ಗೌರವ ಅಧ್ಯಕ್ಷತೆಯನ್ನು ವಹಿಸಿಕೊಂಡ ಬಳಿಕ ದೇಶ ವಿದೇಶಗಳಲ್ಲಿ ಟ್ರಸ್ಟ್ ವಿಸ್ತರಿಸಿದೆ. ಶೀಘ್ರದಲ್ಲೇ ಕೆನಡಾ ಘಟಕ ಆರಂಭಗೊಳ್ಳಲಿದೆ“ ಎಂದರು.

ವೇದಿಕೆಯಲ್ಲಿ ವಿಕೆ ಸಮೂಹ ಸಂಸ್ಥೆಗಳ ಸ್ಥಾಪಕ ಉದ್ಯಮಿ ಮಧ್ಯಗುತ್ತು ಕರುಣಾಕರ ಎಂ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಬಿಲ್ಲಾಡಿ ಅಶೋಕ್ ಶೆಟ್ಟಿ, ಪೂನಾ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಮುಂಬೈ ಹೋಟೆಲ್ ಉದ್ಯಮಿ ಕರ್ನಿರೆ ವಿಶ್ವನಾಥ್ ಶೆಟ್ಟಿ, ಸೀತಾರಾಮ್ ರೈ ಸವಣೂರು, ಪಟ್ಲ ಫೌಂಡೇಶನ್ ಟ್ರಸ್ಟ್‌ನ ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ‌ ನಿರ್ವಹಿಸಿದರು. ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ವಂದಿಸಿದರು.

You may also like

Leave a Comment

Maax-Media-Logo

Maax News covers major news and events of Udupi district. This channel provides detailed reports on the political, social, economic, and cultural life of Udupi district.

Maax News, equipped with the most sophisticated studio in Udupi, assures people comprehensive news coverage.

Copyrights © maaxmedia.in All Rights Reserved. Designed by Sabweb