ಕಾರ್ಕಳ : ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದ ಮೇಲೆ ಪ್ರತಿಷ್ಠಾಪಿಸಿರುವ ಪರಶುರಾಮನ ಪ್ರತಿಮೆ ‘ಅಸಲಿ ನಕಲಿ’ ಸಂಘರ್ಷ ಮುಂದುವರೆದಿದೆ. ಪ್ರತಿಮೆ ನಿರ್ಮಾಣದ ಹೆಸರಿನಲ್ಲಿ ಭ್ರಷ್ಟಾಚಾರ ಎಸಗಲಾಗಿದ್ದು ದಿನಕ್ಕೊಂದು ಸುಳ್ಳು ಹೇಳುತ್ತಾ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಧರ್ಮವಿರೋಧಿ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸ್ ದೂರಿದೆ.
ಈ ಪ್ರತಿಮೆ ವಿವಾದ ಈಗಾಗಲೇ ಕೋರ್ಟ್ ಮೆಟ್ಟಿಲೇರಿದೆ. ವಾದ ಪ್ರತಿವಾದ ಸಂದರ್ಭ ನ್ಯಾಯಾಧೀಶರು “ಸಾರ್ವಜನಿಕರ ಹಣ ಲೂಟಿ ಮಾಡಲಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದನ್ನೇ ಅಸ್ತ್ರ ಮಾಡಿಕೊಂಡಿರುವ ಕಾಂಗ್ರೆಸ್, ಕಾರ್ಕಳ ಶಾಸಕ ಮಾಜಿ ಸಚಿವ ಸುನಿಲ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದೆ. ಪರಶುರಾಮ ಮೂರ್ತಿಯ ಮೇಲ್ಭಾಗ ನಕಲಿ ಎಂದು ಗೊತ್ತಿದ್ದರೂ ಮೇಲ್ಭಾಗವನ್ನು ರಾತ್ರಿ ವೇಳೆ ಕದ್ದು ಸಾಗಿಸಲಾಗಿದೆ. ಜನರಿಗೆ ಸುಳ್ಳು ಹೇಳುತ್ತಾ ತಾನು ಮಾಡಿದ್ದೇ ಸರಿ ಎಂದು ಅಪಪ್ರಚಾರ ಮಾಡುತ್ತಿರುವ ಕಾರ್ಕಳ ಶಾಸಕರ ನಿಜ ಬಣ್ಣ ಬಯಲಾಗಿದೆ ಎಂದು ಕುಟುಕಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾರ್ಕಳ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ, ಇಷ್ಟೆಲ್ಲ ಆಗಿದ್ದರೂ ಈಗ ಅಸಲಿ ಮೂರ್ತಿ ಎಂದು ಕೋರ್ಟಿಗೆ ಮತ್ತೆ ದಾಖಲೆಗಳನ್ನು ತಯಾರು ಮಾಡುತ್ತಿರುವ ಶಾಸಕರ ವರ್ತನೆ ನೋಡಿದರೆ ಅಚ್ಚರಿ ಎನಿಸುತ್ತಿದೆ. ಕೇವಲ ರಾಜಕೀಯ ಲಾಭಕ್ಕೋಸ್ಕರ ಪರಶುರಾಮ ಥೀಮ್ ಪಾರ್ಕ್ ಬಳಸಿಕೊಂಡು ಜನರ ಭಾವನೆ ಜೊತೆ ಚೆಲ್ಲಾಟ ಆಡಿದ್ದಾರೆ. ಕೂಡಲೇ ಸಮಾಜ ಅವರನ್ನು ಎಲ್ಲ ಧಾರ್ಮಿಕ ಕೇಂದ್ರಗಳ ಚಟುವಟಿಕೆಯಿಂದ ಬಹಿಷ್ಕರಿಸಬೇಕು. ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆಯಾಗಿ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.