ಉಡುಪಿ : ಹಿಮಾಚಲ ಪ್ರದೇಶದ ಪ್ರವಾಸೀ ಕ್ಷೇತ್ರವಾದ ಶಿಮ್ಲಾದಲ್ಲಿರುವ ಪುರಾತನ ಗೆಯಿಟೀ ಥಿಯೇಟರ್‌ನಲ್ಲಿ ಆಲ್ ಇಂಡಿಯಾ ಆರ್ಟಿಸ್ಟ್ಸ್ ಅಸೋಸಿಯೆಶನ್ (ಎಐಎಎ) ವತಿಯಿಂದ ನಡೆದ 69ನೇ ವರ್ಷದ ರಾಷ್ಟ್ರೀಯ ಮಟ್ಟದ ಹಿಂದಿ ನಾಟಕ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ನವಸುಮ ರಂಗಮಂಚ ಕೊಡವೂರು ರಂಗ ತಂಡ ಪ್ರದರ್ಶಿಸಿದ ದ್ರೌಣಿ ಹಿಂದಿ ನಾಟಕ ಪ್ರಥಮ ಬಹುಮಾನ ಪಡೆದುಕೊಂಡಿದೆ.
ನಾಲ್ಕು ವರ್ಷಗಳ ಹಿಂದೆ ಇಲ್ಲಿ ನಡೆದಿದ್ದ 65ನೇ ರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ ನವಸುಮ ರಂಗಮಂಚ ತಂಡ ಒಂದು ಬೊಗಸೆ ನೀರು ನಾಟಕವನ್ನು (ಅಂಜಲಿ ಬರ್ ಪಾನಿ) ಹಿಂದಿಯಲ್ಲಿ ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದುಕೊಂಡಿತ್ತು. ಇದೀಗ ಎರಡನೇ ಬಾರಿ ನಾಟಕ ಸ್ಪರ್ಧೆಯಲ್ಲಿ ಶೈಲೀಕೃತ ನಾಟಕ ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದುಕೊಳ್ಳುವುದರ ಜೊತೆಗೆ ಅಶ್ವತ್ಥಾಮ ಪಾತ್ರಧಾರಿ ಬಾಲಕೃಷ್ಣ ಕೊಡವೂರು ಅವರಿಗೆ ಅತ್ಯುತ್ತಮ ನಟ, ದ್ರೌಪದಿ ಪಾತ್ರಧಾರಿ ಚಂದ್ರಾವತಿ ಪಿತ್ರೋಡಿ ಉತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಮೂಲ ದ್ರೌಣಿ ನಾಟಕವನ್ನು ಬಾಲಕೃಷ್ಣ ಕೊಡವೂರು ರಚಿಸಿ ನಿರ್ದೇಶಿಸಿದ್ದಾರೆ. ಡಾ. ಮಾಧವಿ ಭಂಡಾರಿ ಹಿಂದಿಗೆ ಅನುವಾದಿಸಿದ್ದಾರೆ. ಮಂಗಳೂರು ಆಕಾಶವಾಣಿಯ ಸಾಂದರ್ಭಿಕ ಉದ್ಘೋಷಕಿ ಅಕ್ಷತಾರಾಜ್ ಪೆರ್ಲ ರಂಗಪಠ್ಯ ರಚಿಸಿದ್ದಾರೆ. ಜಯಶೇಖರ್ ಮಡಪ್ಪಾಡಿ ಬೆಳಕಿನ ವಿನ್ಯಾಸ ಮಾಡಿದರೆ, ರೋಹಿತ್ ಮಲ್ಪೆ ಸಂಗೀತ ನೀಡಿದ್ದಾರೆ.
ಕೃಪಾಚಾರ್ಯನಾಗಿ ಜನಪದ ಕಲಾವಿದ ಗುರುಚರಣ್ ಪೊಲಿಪು, ಕೃತವರ್ಮನಾಗಿ ರಕ್ಷಿತ್ ಮೂಡುಬೆಟ್ಟು, ಕಾಲಬೈರವನಾಗಿ ವಿನೋದ್, ಸಂಜಯನಾಗಿ ಸುಖೇಶ್ ಮಧ್ವನಗರ, ಕೃಷ್ಣನಾಗಿ ಖುಷಿ ಪೂಜಾರಿ ಹೆರ್ಗ, ಬಲರಾಮನಾಗಿ ಸತೀಶ್ ಕೊಟ್ಯಾನ್ ಕೊಡವೂರು, ಸೇವಕಿಯಾಗಿ ಲಿಪಿಕಾ ಹೆಗ್ಡೆ ಪಂಜಿಮಾರು, ಮೇಳ ಹಾಗೂ ಸೈನಿಕರಾಗಿ ದಿನೇಶ್ ಕದಿಕೆ, ಚಿರಾಗ್ ಮಧ್ವನಗರ, ಪೃಥ್ವಿ ಮಲ್ಪೆ, ಸುಹಾಗ್ ಬೈಲಕೆರೆ, ಪ್ರದೀಪ್ ಕಲ್ಮಾಡಿ, ಮನೀತ್ ಅಮೀನ್ ಮೂಡುಬೆಟ್ಟು ನಟಿಸಿದ್ದಾರೆ. ಸಂತೋಷ್ ಪೆರಂಪಳ್ಳಿ ಬೆಳಕಿಗೆ ಸಹಕರಿಸಿದರು.
ಶಿಮ್ಲಾದಲ್ಲಿ ನಡೆಯುವ ರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಕರ್ನಾಟಕದ ಏಕೈಕ ರಂಗ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಉಡುಪಿಯ ನವಸುಮ ರಂಗಮಂಚ (ರಿ) ಕೊಡವೂರು ತಂಡ ಎರಡನೇ ಬಾರಿಯೂ ಪ್ರಥಮ ಸ್ಥಾನ ಪಡೆಯುವುದರ ಮೂಲಕ ರಾಜ್ಯಕ್ಕೆ ಹೆಮ್ಮೆ ತಂದಿದೆ.