ಶಿರ್ವ : ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಮೂಡುಬೆಳ್ಳೆಯ ತಾಯಿ ಪ್ರಥಮ ಶ್ರೇಣಿಯಲ್ಲಿ ಮತ್ತು ಮಗಳು ವಿಶಿಷ್ಟ ಶ್ರೇಣಿಯಲ್ಲಿ ಜೊತೆಯಾಗಿಯೇ ದ್ವಿತೀಯ ಪಿಯುಸಿ ಪಾಸಾಗುವ ಮೂಲಕ ಸಾಧನೆ ಮಾಡಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಮೂಡುಬೆಳ್ಳೆ ನಿವಾಸಿ ಸುನೀತಾ ಪೂಜಾರಿ ಮತ್ತು ಅವರ ಪುತ್ರಿ ಸನ್ನಿಧಿ ಹೆಚ್. ಪೂಜಾರಿ ಸಾಧನೆ ಮಾಡಿದ ತಾಯಿ-ಮಗಳು.

ಮೂಡುಬೆಳ್ಳೆಯ ದೇವರಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ 27 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಸುನೀತಾ ಪೂಜಾರಿ ಅವರು ಉಡುಪಿ ಸರಕಾರಿ ಮಹಿಳಾ ಪ.ಪೂ. ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಖಾಸಗಿಯಾಗಿ ಬರೆದು 401 ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಮಗಳು ಸನ್ನಿಧಿ ಮೂಡುಬೆಳ್ಳೆ ನೆಲ್ಲಿಕಟ್ಟೆ ಜ್ಞಾನಗಂಗಾ ಪ.ಪೂ. ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ 542 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
121ಕಾಪು ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 101ರ ಮತಗಟ್ಟೆ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿರುವ ಸುನೀತಾ ಅವರು 1994ರಲ್ಲಿ ಎಸ್ಸೆಸ್ಸೆಲ್ಸಿ ತೇರ್ಗಡೆಯಾಗಿದ್ದರು. ಬಳಿಕ ಶಿಕ್ಷಣ ಮುಂದುವರಿಸಲಾಗದೆ 18 ವರ್ಷ ಪ್ರಾಯದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ನೇಮಕಗೊಂಡಿದ್ದರು. ಇದುವರೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಪದೋನ್ನತಿ ಹೊಂದಲು ಎಸ್ಸೆಸೆಲ್ಸಿ ತೇರ್ಗಡೆ ಮತ್ತು ಸೇವಾವಧಿ ಸಾಕಾಗಿತ್ತು. ಆದರೆ ಇದೀಗ ಸರಕಾರ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ-ಯುಕೆಜಿ ಪ್ರಾರಂಭವಾಗುತ್ತದೆ ಮತ್ತು ಕಾರ್ಯಕರ್ತೆಯರಿಗೆ ಪದೋನ್ನತಿ ಹೊಂದಲು ಪಿಯುಸಿ ಉತ್ತೀರ್ಣರಾಗಿರಬೇಕು ಎಂಬ ಸರಕಾರದ ನಿಯಮವಿರುವುದರಿಂದ ಎಸ್ಸೆಸ್ಸೆಲ್ಸಿ ಪಾಸಾಗಿ ಬರೊಬ್ಬರಿ 31 ವರ್ಷಗಳ ಬಳಿಕ ಸುನೀತಾ ಅವರು ಮೊದಲ ಪ್ರಯತ್ನದಲ್ಲಿಯೇ ಕಲಾ ವಿಭಾಗದಲ್ಲಿ 401 ಅಂಕ ಗಳಿಸಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಮಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದು, ಅವಳೊಂದಿಗೆ ನಾನೂ ಪ್ರಥಮ ಶ್ರೇಣಿಯಲ್ಲಿ ಪರೀಕ್ಷೆ ಪಾಸು ಮಾಡಿದ್ದು ತುಂಬಾ ಖುಷಿ ತಂದಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಸುನೀತಾ ಪೂಜಾರಿ. ಸಾಧನೆ ಮಾಡಲು ಸಹಕರಿಸಿದಪತಿ, ಮಕ್ಕಳು, ಮೇಲ್ವಿಚಾರಕರು, ಸಹೋದ್ಯೋಗಿಗಳು ಮತ್ತು ಅಂಗನವಾಡಿ ಕೇಂದ್ರದ ಸಹಾಯಕರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.