ಉಡುಪಿ : ನಗರಸಭೆಯ ಕಂದಾಯ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಂದಾಯ ವಿಭಾಗಕ್ಕೆ ಸಂಬಂಧಿಸಿದ ಕಡತಗಳ ತುರ್ತು ವಿಲೇವಾರಿಗೆ ಆದ್ಯತೆ ನೀಡುವಂತೆ ಶಾಸಕ ಯಶ್‌ಪಾಲ್ ಸುವರ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಸಭೆಯಲ್ಲಿ ಇ – ಖಾತಾ ಅರ್ಜಿಗಳ ಪ್ರಕ್ರಿಯೆ ತೀವ್ರ ವಿಳಂಬವಾಗುತ್ತಿದ್ದು, ಕಂದಾಯ ವಿಭಾಗಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ಹಲವು ಬಾರಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ.
ಮನೆ ಹಾಗೂ ವಾಣಿಜ್ಯ ಕಟ್ಟಡಗಳ ತೆರಿಗೆ ಪಾವತಿಗೆ ಸೂಕ್ತ ವ್ಯವಸ್ಥೆ, ಸರ್ವರ್ ಸಮಸ್ಯೆ ಪರಿಹಾರಕ್ಕೆ ಕೈಗೊಳ್ಳಬೇಕು. ನಗರಸಭೆಗೆ ಸಂಬಂಧಿಸಿದ ಜಾಗಗಳನ್ನು ಗುರುತಿಸಿ ಸುಪರ್ದಿಗೆ ಪಡೆಯಲು ಕ್ರಮ ವಹಿಸಬೇಕು.
ವಿವಿಧ ಮೂಲಗಳ ತೆರಿಗೆ ಸಂಗ್ರಹದ ಜೊತೆಗೆ ಬಾಕಿ ಇರುವ ತೆರಿಗೆ ಸಂಗ್ರಹಣೆಗೆ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ರಿಕ್ಷಾ ನಿಲ್ದಾಣ, ಬಸ್ ನಿಲ್ದಾಣ ನಿರ್ಮಾಣ, ವಾಣಿಜ್ಯ ಸಂಕೀರ್ಣಗಳ ನಿರ್ವಹಣೆ ಸಹಿತ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಹೇಳಿದರು.
ಸಭೆಯಲ್ಲಿ ನಗರಸಭೆ ಪೌರಾಯುಕ್ತರಾದ ರಾಯಪ್ಪ, ಕಂದಾಯ ಅಧಿಕಾರಿ ಸಂತೋಷ್, ಕಂದಾಯ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.