ಬೆಳಗಾವಿ : ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಲಜೀವನ ಮಿಷನ್ ಯೋಜನೆಯಡಿಯಲ್ಲಿ ಕಾಮಗಾರಿಗಳು ಅನುಷ್ಠಾನಗೊಳ್ಳದ ಕುರಿತು ಸರಕಾರದ ಗಮನನ್ನು ಸೆಳೆದರು.
ಜಲಜೀವನ ಮಿಷನ್ ಯೋಜನೆಯಲ್ಲಿ ನೀರಿನ ಮೂಲಗಳು ಅನುಷ್ಠಾನವಾಗದ ಕುರಿತು ಪ್ರಸ್ತಾಪಿಸಿ ಶೀಘ್ರವಾಗಿ ಯೋಜನೆಗೆ ಸಂಬಂಧಿಸಿದ ನೀರಿನ ಮೂಲಗಳನ್ನು ಪ್ರಥಮವಾಗಿ ಶೋಧಿಸಿ ಅಳವಡಿಸುವ ಮೂಲಕ ಸಮರ್ಪಕ ಅನುಷ್ಠಾನಕ್ಕಾಗಿ ಶೂನ್ಯ ವೇಳೆಯಲ್ಲಿ ಸರಕಾರವನ್ನು ಒತ್ತಾಯಿಸಿದರು.
ಮಳೆಗಾಲ ಮುಗಿದು ಚಳಿ ಕಾಲಿರಿಸಿದ್ದರೂ ಕರಾವಳಿಯಲ್ಲಿ ಜಲಜೀವನ ಮಿಷನ್ ಕಾಮಗಾರಿ ಪುನರಾರಂಭವಾಗಿಲ್ಲ. ಮಳೆಗಾಲಕ್ಕೆ ಪೂರ್ವದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ವಿವಿಧೆಡೆ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು ಮರಳಿ ಚಾಲನೆ ಸಿಕ್ಕಿಲ್ಲ. ಒಟ್ಟಿನಲ್ಲಿ ಜಲಜೀವನ್ ಮಿಷನ್‌ಗೆ ಜೀವ ಇಲ್ಲದಂತಾಗಿದೆ. ಮನೆ ಮನೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ಕೇಂದ್ರ ಸರಕಾರದ ಯೋಜನೆ ಇದಾಗಿದೆ. ಹಲವು ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆಗಳ ಆವರಣದಲ್ಲಿ ನಲ್ಲಿ ನೀರು ಹಿಡಿಯಲು ಬೇಕಾದ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ನಲ್ಲಿ ಮೂಲಕ ನೀರು ಪೂರೈಸುವ ಪ್ರಕ್ರಿಯೆ ಆರಂಭವಾಗಿಲ್ಲ. ದಾಖಲೆ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ 2,94,409 ರಲ್ಲಿ 2,05,807 ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ಜಲಜೀವನ್ ಮಿಷನ್ ಕಾಮಗಾರಿಗಾಗಿ ಅಲ್ಲಲ್ಲಿ ಪೈಪ್‌ಲೈನ್ ಅಗೆದು ಮಣ್ಣು ತುಂಬಿದ್ದಾರೆ. ಇನ್ನು ಕೆಲವು ಕಡೆ ಪೈಪ್‌ಲೈನ್ ಪೂರ್ತಿಯಾಗಿ ಅಳವಡಿಸಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಅಡಚಣೆ ಉಂಟಾಗಿದೆ.
ಆದ್ದರಿಂದ ಈ ಯೋಜನೆಗೆ ಸಂಬಂಧಿಸಿದಂತೆ ನೀರಿನ ಮೂಲವನ್ನು ಮೊದಲು ಶೋಧಿಸಿ ಅನುಷ್ಠಾನ ಮಾಡುವ ಜೊತೆಗೆ ಆದಷ್ಟು ಬೇಗ ಕಾಮಗಾರಿಯನ್ನು ಪುನರಾರಂಭಿಸಲು ಕ್ರಮಕೈಗೊಳ್ಳುವಂತೆ ಮಂಜುನಾಥ ಭಂಡಾರಿ ಅವರು ಒತ್ತಾಯಿಸಿದ್ದಾರೆ.