ಉಡುಪಿ : ಉಡುಪಿ ಜಿಲ್ಲೆ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದುರ್ಬಳಕೆ ನಡೆಯುತಿದ್ದು, ಇದರಿಂದ ಸರಕಾರಕ್ಕೆ ಕೋಟ್ಯಾಂತರ ರೂ. ಜಿಎಸ್‌ಟಿ ಹಾಗೂ ಇತರ ರೂಪದ ನಷ್ಟ ಸಂಭವಿಸುತ್ತಿದೆ. ಅಲ್ಲದೇ ಗೃಹ ಬಳಕೆಯ ಸಿಲಿಂಡರ್‌ಗಳನ್ನು ಅಕ್ರಮವಾಗಿ ವಾಣಿಜ್ಯ ಬಳಕೆಗೆ ಉಪಯೋಗಿಸುವುದರಿಂದ ಸ್ಪೋಟ ಹಾಗೂ ಬೆಂಕಿ ಅವಘಡದಂತ ದುರಂತಗಳು ಸಂಭವಿಸುತ್ತಿವೆ ಎಂದು ಈ ಕುರಿತು ನಾಡಿನ ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸುತ್ತಿರುವ ಗ್ರಾಹಕ ದಕ್ಷತಾ ಕಲ್ಯಾಣ ಫೌಂಡೇಷನ್‌ನ ಕರ್ನಾಟಕ ವಿಭಾಗದ ಮುಖ್ಯಸ್ಥ ಚೇತನ್ ಕುಮಾರ್ ಹೇಳಿದ್ದಾರೆ.
ತಮ್ಮ ಎನ್‌ಜಿಒ ಪರವಾಗಿ ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಗೃಹ ಬಳಕೆಯ 14.2 ಕೆ.ಜಿ. ತೂಕದ ಗ್ಯಾಸ್ ಸಿಲಿಂಡರ್ ಶೇ.5 ಜಿಎಸ್‌ಟಿ ಸಹಿತ ಸುಮಾರು 800ರೂ.ಗೆ ಸಿಗುತ್ತದೆ. ಅದೇ 19ಕೆ.ಜಿ. ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಬೆಲೆ ಶೇ.18 ಜಿಎಸ್‌ಟಿಯೊಂದಿಗೆ ಸುಮಾರು 2,000ರೂ.ಗಳಾಗುತ್ತವೆ. ಹೀಗಾಗಿ 14.2ಕೆ.ಜಿ. ಸಿಲಿಂಡರ್‌ನಲ್ಲಿರುವ ಅನಿಲವನ್ನು 19ಕೆ.ಜಿಯ ವಾಣಿಜ್ಯ ಸಿಲಿಂಡರ್ ಆಗಿ ಪರಿವರ್ತಿಸಲಾಗುತ್ತಿದೆ ಎಂದವರು ಆರೋಪಿಸಿದರು.
ಇಂಥ ಸಿಲಿಂಡರ್‌ಗಳನ್ನು ಅಕ್ರಮವಾಗಿ ವಾಹನಗಳಿಗೆ, ಹೊಟೇಲ್ ಸೇರಿದಂತೆ ವಿವಿಧ ವಾಣಿಜ್ಯ ಉದ್ದೇಶಗಳಿಗೆ ನೀಡಿ ಸರಕಾರಕ್ಕೆ ಜಿಎಸ್‌ಟಿ ಸಹಿತ ವಿವಿಧ ರೀತಿಯಲ್ಲಿ ಕೋಟ್ಯಾಂತರ ರೂ.ನಷ್ಟವನ್ನುಂಟು ಮಾಡಲಾಗುತ್ತಿದೆ ಎಂದ ಚೇತನ್ ಕುಮಾರ್, ಇಂಥ ಸಂಘಟಿತ ದಂಧೆ ಮಾಡುವವರಿಗೆ ಸರಕಾರಿ ತೈಲ ಕಂಪೆನಿಗಳು ಹಾಗೂ ಎಲ್‌ಪಿಜಿ ವಿತರಕರು ಬೆಂಬಲ ನೀಡುತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಇವುಗಳ ವಿರುದ್ಧ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಇಂಥ ಅಕ್ರಮ ದಂಧೆ ವಿರುದ್ಧ ತಮ್ಮ ಸಂಘಟನೆ ವ್ಯಾಪಕ ಜನಜಾಗೃತಿಗೆ ಮುಂದಾಗಿದೆ ಎಂದ ಅವರು ಕಾಳಸಂತೆಕೋರರಿಗೆ ಸ್ವಲ್ಪ ಹೆಚ್ಚು ಹಣ ನೀಡಿದರೆ ಗೃಹ ಬಳಕೆಯ ಸಿಲಿಂಡರ್‌ಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತಿದೆ. ಅಲ್ಲದೇ ಕೆಲವು ಗ್ಯಾಸ್ ಏಜೆನ್ಸಿಗಳು ತೈಲ ಕಂಪೆನಿಗಳಿಂದ ಗ್ರಾಹಕರ ಹೆಸರಿನಲ್ಲಿ ಹೆಚ್ಚುವರಿ ಸಿಲಿಂಡರ್‌ಗಳನ್ನು ಪಡೆಯುತಿದ್ದು, ಇಂಥ ಅವ್ಯವಹಾರಕ್ಕೆ ಕಾರಣವಾಗಿದೆ. ಇವರು ಡಮ್ಮಿ ಗ್ರಾಹಕರ ಹೆಸರಿನಲ್ಲಿ ನೋಂದಣಿ ಮಾಡಿಸಿ ಕಪ್ಪು ಮಾರುಕಟ್ಟೆನಲ್ಲಿ ಮಾರುತಿದ್ದಾರೆ ಎಂದರು.
ಒಟ್ಟು ಕುಟುಂಬಕ್ಕೆ ಒಂದು ವರ್ಷಕ್ಕೆ 12 ಸಿಲಿಂಡರ್ ಬಳಕೆಗೆ ಅವಕಾಶವಿದೆ. ಈಗ ಹೆಚ್ಚಿನ ಕುಟುಂಬಗಳು ವರ್ಷಕ್ಕೆ 8-9 ಸಿಲಿಂಡರ್‌ಗಳನ್ನು ಮಾತ್ರ ಬಳಸುತಿದ್ದು, ಉಳಿದ ಸಿಲಿಂಡರ್‌ಗಳು ಇಂಥ ಕಪ್ಪುದಂಧೆಗೆ ಮಾರಾಟವಾಗುತ್ತಿವೆ. ಕಾಳಸಂತೆಯಲ್ಲಿ ಅಕ್ರಮ ಸಿಲಿಂಡರ್ ಮಾರಾಟ ದಂಧೆ ದೇಶಾದ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಚೇತನ್ ಕುಮಾರ್ ವಿವರಿಸಿದರು.
ವಾಹನಗಳಲ್ಲಿ ಗೃಹ ಬಳಕೆಗೆ ಬಳಸುವ 14.2 ಕೆ.ಜಿ. ಎಲ್‌ಪಿಜಿ ಗ್ಯಾಸ್ ತುಂಬಿಸುವುದು ಅತ್ಯಂತ ಅಪಾಯಕಾರಿ. ಇದು ಯಾವುದೇ ಕ್ಷಣದಲ್ಲಿ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಮನೆಯ ಸಿಲಿಂಡರ್‌ನ್ನು ಅಕ್ರಮವಾಗಿ ಬಳಸಿದರೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದವರು ಹೇಳಿದರು.
ಜನತೆ ಈ ಬಗ್ಗೆ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಅಟೋರಿಕ್ಷಾ, ಕಾರು ಮತ್ತಿತರ ವಾಹನಗಳಲ್ಲಿ ಅಕ್ರಮವಾಗಿ ಸ್ವದೇಶಿ ಸಿಲಿಂಡರ್‌ಗಳನ್ನು ಬಳಸುವವರಿಗೆ ಅಪಾಯದ ಕುರಿತು ವಿವರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕ ದಕ್ಷತಾ ಕಲ್ಯಾಣ ಫೌಂಡೇಷನ್ ಜನಜಾಗೃತಿ ಅಭಿಯಾನ ಪ್ರಾರಂಭಿಸಿದೆ. ಇದನ್ನು ಕಂಡಕೂಡಲೇ ಜನರು ಪೊಲೀಸ್ ಅಥವಾ ಸರಕಾರಿ ಸರಬರಾಜು ಇಲಾಖೆಗೆ ಮಾಹಿತಿ ನೀಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಫೌಂಡೇಷನ್‌ನ ಆಡಳಿತಾಧಿಕಾರಿ ಪ್ರಶಾಂತ್ ಜಾಮಗಡೆ ಹಾಗೂ ಉತ್ತರ ಕರ್ನಾಟಕ ವಿಭಾಗದ ಮುಖ್ಯಸ್ಥ ಅರುಣ ಮಾನಗಾಂವೆ ಉಪಸ್ಥಿತರಿದ್ದರು.