ಮಂಗಳೂರು : ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಅನ್ನು ಬೆಂಗಳೂರಿನಿಂದ ಮಂಗಳೂರಿಗೆ ಸಾಗಾಟ/ಮಾರಾಟ ಮಾಡುತ್ತಿದ್ದ ಬಂಟ್ವಾಳ ಸಜೀಪಮೂಡ ಗ್ರಾಮದ ಆಸೀಫ್ ಆಲಿಯಾಸ್ ಆಚಿ (32) ಎಂಬತನನ್ನು ಮಂಗಳೂರು ಸಿಸಿಬಿ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

ಈತನಿಂದ 1.35 ಲಕ್ಷ ರೂ. ಮೌಲ್ಯದ 27 ಗ್ರಾಂ ಎಂಡಿಎಂಎ, ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪನ ಸೇರಿದಂತೆ 1.45 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈತನ ವಿರುದ್ಧ ಈ ಹಿಂದೆ 2018ರಲ್ಲಿ ಸುರತ್ಕಲ್ ಠಾಣೆಯಲ್ಲಿ, 2021ರಲ್ಲಿ ವಿಟ್ಲ ಠಾಣೆಯಲ್ಲಿ ಹಾಗೂ 2023ರಲ್ಲಿ ಬಂಟ್ವಾಳ ನಗರ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟಂತೆ 3 ಪ್ರಕರಣ ದಾಖಲಾಗಿತ್ತು.
ಈ ಮಾದಕ ವಸ್ತು ಎಂಡಿಎಂಎ ಮಾರಾಟ/ಸಾಗಾಟದ ಪತ್ತೆ ಕಾರ್ಯವನ್ನು ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ ಅವರ ನೇತೃತ್ವದಲ್ಲಿ ಪಿಎಸ್‌ಐ ಶರಣಪ್ಪ ಭಂಡಾರಿ, ಎಎಸ್‌ಐ ಸುಜನ್ ಶೆಟ್ಟಿ ಮತ್ತು ಸಿಸಿಬಿ ಸಿಬಂದಿ ನಡೆಸಿದ್ದರು.