Friday, November 22, 2024
Banner
Banner
Banner
Home » ಎಲೆಕ್ಟ್ರಿಕಲ್ ಅಟೋರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚರಿಸಲು ನಿರ್ಧಾರದ ವಿರುದ್ಧ ರಿಕ್ಷಾ ಚಾಲಕರಿಂದ ಬೃಹತ್ ಪ್ರತಿಭಟನೆ

ಎಲೆಕ್ಟ್ರಿಕಲ್ ಅಟೋರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚರಿಸಲು ನಿರ್ಧಾರದ ವಿರುದ್ಧ ರಿಕ್ಷಾ ಚಾಲಕರಿಂದ ಬೃಹತ್ ಪ್ರತಿಭಟನೆ

by NewsDesk

ಮಂಗಳೂರು : ಎಲೆಕ್ಟ್ರಿಕಲ್ ಅಟೋರಿಕ್ಷಾಗಳಿಗೆ ದ.ಕ.ಜಿಲ್ಲೆಯಾದ್ಯಂತ ಸಂಚರಿಸಲು ಅನುಮತಿ ನೀಡಿರುವ ದ.ಕ.ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿ ಅಟೋರಿಕ್ಷಾ ಚಾಲಕರು ನಗರದಲ್ಲಿಂದು CITU ನೇತೃತ್ವದಲ್ಲಿ ವಿವಿಧ ಅಟೋರಿಕ್ಷಾ ಚಾಲಕರ ಸಂಘಟನೆಗಳ ಸಹಭಾಗಿತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು.

500ಕ್ಕೂ ಮಿಕ್ಕಿದ ಅಟೋರಿಕ್ಷಾ ಚಾಲಕರು ಜಿಲ್ಲಾಡಳಿತದ ತೀರ್ಮಾನ ಹಾಗೂ ಕೇಂದ್ರ-ರಾಜ್ಯ ಸರಕಾರಗಳ ಬೇಜವಾಬ್ದಾರಿತನದ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗುತ್ತಾ ಸರಕಾರಗಳ ನೀತಿಗಳನ್ನು ಖಂಡಿಸಿದರು.

ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಫೆಡರೇಶನ್ ಆಫ್ ಕರ್ನಾಟಕ ಅಟೋರಿಕ್ಷಾ ಡ್ರೈವರ್ಸ್ ಯೂನಿಯನ್‌ನ ದ.ಕ‌.ಜಿಲ್ಲಾಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್‌ರವರು, ದೇಶದಲ್ಲಿ ನಿರುದ್ಯೋಗದಿಂದ ಕಂಗೆಟ್ಟ ಯುವಜನರಿಗೆ ಸ್ವಂತ ಬದುಕು ರೂಪಿಸುವ ಹಾಗೂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕಲ್ ಅಟೋರಿಕ್ಷಾಗಳನ್ನು ನೀಡುವ ಕೇಂದ್ರ ಸರಕಾರದ ಯೋಜನೆಯು ಪ್ರಸ್ತುತ ಯಾವುದೇ ಮಾನದಂಡವಿಲ್ಲದೆ ಉದ್ಯೋಗ ಸೃಷ್ಠಿಯ ಬದಲು ಉದ್ಯಮವಾಗಿ ಪರಿವರ್ತನೆಗೊಂಡಿದೆ. ಒಬ್ಬೊಬ್ಬರು 25ರಿಂದ 50ರಷ್ಟು ರಿಕ್ಷಾಗಳನ್ನು ಖರೀದಿಸಿ ಮತ್ತೆ ಬಡಪಾಯಿ ಜನತೆಯನ್ನು ಸುಲಿಗೆ ಮಾಡಲು ಕೇಂದ್ರ ಸರಕಾರವೇ ಹೊರಟಿದೆ. ಎಲೆಕ್ಟ್ರಿಕಲ್ ವಾಹನ ಕಂಪೆನಿಗಳ ಆಮಿಷಕ್ಕೆ ಬಲಿಯಾದ ಜಿಲ್ಲಾಡಳಿತ ಬಡಪಾಯಿ ರಿಕ್ಷಾಚಾಲಕರ ಬದುಕನ್ನೇ ಸರ್ವನಾಶ ಮಾಡಲು ಹೊರಟಿದೆ. ರಿಕ್ಷಾಚಾಲಕರು ಅನುಭವಿಸುತ್ತಿರುವ ಹಲವಾರು ನಮೂನೆಯ ಸಮಸ್ಯೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಅದಕ್ಕೆ ವೈಜ್ಞಾನಿಕ ನೆಲೆಯಲ್ಲಿ ಪರಿಹಾರ ಒದಗಿಸಬೇಕು. ಈ ನಿಟ್ಟಿನಲ್ಲಿ ವಿಶಾಲ ತಳಹದಿಯ ಆಧಾರದಲ್ಲಿ ಸಮಾಲೋಚನಾ ಸಭೆಯನ್ನು ಜಿಲ್ಲಾಡಳಿತ ವ್ಯವಸ್ಥೆಗೊಳಿಸಬೇಕು ಹಾಗೂ ಈಗಾಗಲೇ ಎಲೆಕ್ಟ್ರಿಕಲ್ ರಿಕ್ಷಾಗಳು ಜಿಲ್ಲೆಯಾದ್ಯಂತ ಸಂಚರಿಸಲು ನೀಡಿರುವ ಆದೇಶವನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದಲ್ಲಿ ಸಾಮೂಹಿಕ ಧರಣಿ ಸತ್ಯಾಗ್ರಹ, ರಸ್ತೆತಡೆ, ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ, ಅಟೋರಿಕ್ಷಾ ಬಂದ್ ನಂತಹ ತೀವ್ರ ರೀತಿಯ ಹೋರಾಟಗಳನ್ನು ಹಮ್ಮಿಕೊಳ್ಳಬೇಕಾದೀತು. ಇದರಿಂದ ಆಗುವ ಪರಿಣಾಮಗಳಿಗೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.

ಅಟೋರಿಕ್ಷಾ ಚಾಲಕರ ಸಂಘಟನೆಯ ಹಿರಿಯ ನಾಯಕರಾದ ಅಶೋಕ್ ಶೆಟ್ಟಿಯವರು ಮಾತನಾಡುತ್ತಾ, ಮಂಗಳೂರು ನಗರದಲ್ಲಿ ಈಗಾಗಲೇ ಅಂದಾಜು 9000ದಷ್ಟು ಅಟೋರಿಕ್ಷಾಗಳು ಓಡಾಡುತ್ತಿದ್ದು, ಜಿಲ್ಲಾಡಳಿತದ ಈ ತೀರ್ಮಾನದಿಂದಾಗಿ ಮತ್ತಷ್ಟು ಅಟೋರಿಕ್ಷಾಗಳು ನಗರವನ್ನು ಸೇರ್ಪಡೆಗೊಂಡರೆ ಅತ್ಯಂತ ಸಣ್ಣ ನಗರ ಮಂಗಳೂರಿನ ರಸ್ತೆ ಹಾಗೂ ಅಟೋರಿಕ್ಷಾ ನಿಲ್ದಾಣ ಸೇರಿದಂತೆ ಅಟೋರಿಕ್ಷಾ ಚಾಲಕರ ಪರಿಸ್ಥಿತಿ ಹೇಗಿರಬಹುದೆಂದು ಊಹಿಸಲು ಅಸಾಧ್ಯ ಎಂದು ಆತಂಕ ವ್ಯಕ್ತಪಡಿಸಿದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿಯವರು ಮಾತನಾಡಿ, ಮಂಗಳೂರು ನಗರದಲ್ಲಿ ಈ ಹಿಂದೆ ಸುಮಾರು 375ರಷ್ಟು ಅಟೋರಿಕ್ಷಾ ನಿಲ್ದಾಣಗಳಿದ್ದು, ಬಳಿಕ ರಸ್ತೆ ಅಗಲೀಕರಣ, ಕಾಂಕ್ರಿಟೀಕರಣದ ಹೆಸರಿನಲ್ಲಿ ಬಹುತೇಕ ರಿಕ್ಷಾ ನಿಲ್ದಾಣಗಳು ಕಣ್ಮರೆಯಾಗಿದೆ. ಸದ್ಯಕ್ಕೆ 115ರಷ್ಟು ಅಟೋರಿಕ್ಷಾ ನಿಲ್ದಾಣಗಳಿದ್ದು ಈಗಿರುವ ರಿಕ್ಷಾಗಳಿಗೆ ಅದು ಯಾವುದಕ್ಕೂ ಸಾಕಾಗುವುದಿಲ್ಲ. ಬದಲಿಗೆ ಮತ್ತಷ್ಟು ಎಲೆಕ್ಟ್ರಿಕಲ್ ರಿಕ್ಷಾಗಳು ಬಂದರೆ ನಿಲ್ದಾಣಗಳೇ ಇಲ್ಲದೆ ಊರಿಡೀ ತಿರುಗಾಡುವಂತಹ ಪರಿಸ್ಥಿತಿ ಎದುರಾಗಬಹುದಾಗಿದೆ ಎಂದು ಹೇಳಿದರು.

ಪ್ರತಿಭಟನೆಯನ್ನುದ್ದೇಶಿಸಿ ಅಟೋರಿಕ್ಷಾ ಚಾಲಕರ ಸಂಘಟನೆಗಳ ಮುಖಂಡರಾದ ಶೇಖರ್ ದೇರಳಕಟ್ಟೆ, ಲೋಕೇಶ್ ಶೆಟ್ಟಿ, ಅರುಣ್ ಕುಮಾರ್, ಕೃಷ್ಣ ಹಾಗೂ ಸಿಐಟಿಯು ಜಿಲ್ಲಾಧ್ಯಕ್ಷರಾದ ಜೆ ಬಾಲಕೃಷ್ಣ ಶೆಟ್ಟಿಯವರು ಮಾತನಾಡಿ, ರಿಕ್ಷಾಚಾಲಕರು ಅನುಭವಿಸುತ್ತಿರುವ ಹಲವಾರು ನಮೂನೆಯ ಸಮಸ್ಯೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಅದಕ್ಕೆ ವೈಜ್ಞಾನಿಕ ನೆಲೆಯಲ್ಲಿ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, ವಿವಿಧ ಅಟೋರಿಕ್ಷಾ ಚಾಲಕರ ಸಂಘಟನೆಗಳ ಮುಖಂಡರಾದ ವಸಂತ ಶೆಟ್ಟಿ, ಜಯಂತ, ಭರತ್ ಕುಮಾರ್ ಮುಂತಾದವರು ಭಾಗವಹಿಸಿದ್ದರು.

ಹೋರಾಟದ ನೇತೃತ್ವವನ್ನು FKARDU ನಾಯಕರಾದ ಮಹಮ್ಮದ್ ಅನ್ಸಾರ್, ಸುರೇಶ್ ದೇರೆಬೈಲ್, ವಿಶ್ವನಾಥ, ಕೃಷ್ಣಪ್ಪ ಗೌಡ, ಸ್ಟಾನ್ಲಿ ನೊರೋನ್ಹಾ, ವಿಜಯ, ಇಬ್ರಾಹಿಂ ಮದಕ, ಮುಸ್ತಾಕ್ ಆಲಿ, ಬಾಲಕ್ರಷ್ಣ, ಕುಮಾರ್ ಬಲ್ಮಠ ಮುಂತಾದವರು ವಹಿಸಿದ್ದರು

You may also like

Leave a Comment

Maax-Media-Logo

Maax News covers major news and events of Udupi district. This channel provides detailed reports on the political, social, economic, and cultural life of Udupi district.

Maax News, equipped with the most sophisticated studio in Udupi, assures people comprehensive news coverage.

Copyrights © maaxmedia.in All Rights Reserved. Designed by Sabweb