ಉಡುಪಿ : ಮಲ್ಪೆ ಬಂದರಿನಲ್ಲಿ ನಡೆದ ಘಟನೆ ತೀರ ದುರದೃಷ್ಟಕರವಾಗಿದ್ದು ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಮೀನುಗಾರಿಕೆ ಹಾಗೂ ಪೊಲೀಸ್ ಇಲಾಖೆ ಅಗತ್ಯ ಕ್ರಮ ವಹಿಸಬೇಕಿದೆ ಎಂದು ಉಡುಪಿ ಯಶ್‌ಪಾಲ್ ಸುವರ್ಣ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ದೇಶದ ಅತೀ ದೊಡ್ಡ ಸರ್ವಋತು ಮೀನುಗಾರಿಕೆ ಮಲ್ಪೆ ಬಂದರಿನ ನಿರ್ವಹಣೆಯ ಬಗ್ಗೆ ಇಲಾಖೆಯ ದಿವ್ಯ ನಿರ್ಲಕ್ಷ್ಯ ಇಂತಹ ಘಟನೆಗೆ ಅವಕಾಶ ನೀಡಿದೆ. ಬಂದರಿನಲ್ಲಿ ನಿರಂತರವಾಗಿ ಕಳ್ಳತನ ಘಟನೆಗಳು ವರದಿಯಾಗುತ್ತಿದ್ದರೂ ಸೂಕ್ತ ಸಿಸಿಟಿವಿ ಅಳವಡಿಕೆ, ಹಾಗೂ ಭದ್ರತಾ ಸಿಬ್ಬಂದಿಗಳನ್ನು ನೇಮಿಸಿಲ್ಲ. ಈ ಬಗ್ಗೆ ಮೀನುಗಾರಿಕೆ ಮತ್ತು ಬಂದರು ಇಲಾಖೆ ಹಾಗೂ ಕರಾವಳಿ ಕಾವಲು ಪೊಲೀಸ್ ಅಧಿಕಾರಿಗಳೊಂದಿಗೆ 3 ಬಾರಿ ಸಭೆ ನಡೆಸಿ ಸೂಚನೆ ನೀಡಿದ್ದು, ಬಂದರು ನಿರ್ವಹಣೆಯ ಗುತ್ತಿಗೆ ಅವಧಿ ಮುಗಿದು ಒಂದು ವರ್ಷ ಮೀರಿದ್ದರೂ ಟೆಂಡರ್ ನಿಯಮಗಳನ್ನು ಪಾಲಿಸದೆ ನಿರ್ವಹಣೆಯಲ್ಲಿ ಲೋಪ ಎಸಗಿದ ಬಗ್ಗೆ ದೂರುಗಳಿದ್ದರೂ ಅದೇ ವ್ಯಕ್ತಿಗೆ ನಿಯಮ ಬಾಹಿರವಾಗಿ ಟೆಂಡರ್ ಮುಂದುವರೆಸಿದ್ದಾರೆ.
ಈವರೆಗೂ ಹೊಸ ಟೆಂಡರ್ ಕರೆಯದೇ ಇರುವ ಬಗ್ಗೆ ಕಳೆದ ಶನಿವಾರ ಕೂಡ ಸಭೆ ನಡೆಸಿ ಸೂಚನೆ ನೀಡಲಾಗಿತ್ತು. ಈ ಬಗ್ಗೆ ಜಿಲ್ಲಾಡಳಿತಕ್ಕೂ ಮಾಹಿತಿ ನೀಡಿದ್ದರೂ ಕ್ರಮ ಕೈಗೊಳ್ಳದೇ ಮೀನುಗಾರರು ಸಮಸ್ಯೆ ಎದುರಿಸುವಂತಾಗಿದೆ. ಜಿಲ್ಲಾಡಳಿತ ತಕ್ಷಣ ಈ ಗಂಭೀರ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಸಾವಿರಾರು ಮಂದಿಗೆ ಅನ್ನದ ಬಟ್ಟಲಾಗಿರುವ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಎಲ್ಲರೂ ಸೌಹಾರ್ದ ರೀತಿಯಲ್ಲಿ ಮೀನುಗಾರಿಕೆ ಚಟುವಟಿಕೆಯಲ್ಲಿ ಹಲವು ದಶಕಗಳಿಂದ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಹಲವು ಬಾರಿ ಸಣ್ಣ ಪುಟ್ಟ ಘಟನೆಗಳು ನಡೆದಾಗ ಮಲ್ಪೆ ಮೀನುಗಾರ ಸಂಘದ ನೇತೃತ್ವದಲ್ಲಿ ಸೌಹಾರ್ದ ರೀತಿಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ. ಬಡವ ಶ್ರೀಮಂತ ಭೇದವಿಲ್ಲದೆ ಉಡುಪಿ ಮಾತ್ರವಲ್ಲದೇ ಹೊರ ರಾಜ್ಯ, ಹೊರ ಜಿಲ್ಲೆಯ ಸಾವಿರಾರು ಮಂದಿ ಮಲ್ಪೆ ಬಂದರಿನಲ್ಲಿ ದುಡಿಯುತ್ತಿದ್ದು ಈವರೆಗೂ ಎಂದಿಗೂ ಮೇಲು ಕೀಳೆಂಬ ತಾರತಮ್ಯಕ್ಕೆ ಮಲ್ಪೆ ಬಂದರಿನಲ್ಲಿ ಎಂದಿಗೂ ಅವಕಾಶ ನೀಡಿಲ್ಲ. ಕಾರ್ಮಿಕರ ಬಗ್ಗೆ ಮಲ್ಪೆ ಮೀನುಗಾರರ ಸಂಘ ವಿಶೇಷ ಕಾಳಜಿವಹಿಸುತ್ತಿದ್ದು ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಹೊರ ಜಿಲ್ಲೆಯ ಕಾರ್ಮಿಕರಿಗೆ ಬಂದರಿನಲ್ಲಿ ಊಟ ಹಾಗೂ ತಮ್ಮ ಊರುಗಳಿಗೆ ತೆರಳಲು ಬಸ್ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿರುವ ಉದಾಹರಣೆ ಇದೆ.
ಇತ್ತೀಚಿನ ದಿನಗಳಲ್ಲಿ ತೀವ್ರ ಮತ್ಸ್ಯಕ್ಷಾಮದಿಂದ ಮೀನುಗಾರರು ಆರ್ಥಿಕ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಇಂತಹ ಆಕಸ್ಮಿಕ ಘಟನೆ ನಡೆದಿದ್ದು, ಈಗಾಗಲೇ ಪೊಲೀಸ್ ಇಲಾಖೆ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ. ಅಧಿವೇಶನದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿರುವ ಕಾರಣ ಈಗಾಗಲೇ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರೊಂದಿಗೆ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತ, ಮಲ್ಪೆ ಮೀನುಗಾರ ಸಂಘದ ಜೊತೆಯಾಗಿ ಸೂಕ್ತ ಕ್ರಮವಹಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.