ಉಡುಪಿ : ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಸಂಸ್ಥೆಯ ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಿಲ್ಲೆಯ ಸರಕಾರಿ ಹಾಗೂ ಅನುದಾನಿತ 45 ಕಾಲೇಜುಗಳ 328 ಅರ್ಹ ವಿದ್ಯಾರ್ಥಿನಿಯರಿಗೆ 28 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ಅಜ್ಜರಕಾಡು ಟೌನ್ ಹಾಲ್‌ನಲ್ಲಿ ಮಂಗಳವಾರ ನಡೆಯಿತು.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿ ವೇತನವನ್ನು ವಿತರಿಸಿದರು. ಬಳಿಕ ಮಾತನಾಡಿ, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆ ಸ್ತುತ್ಯರ್ಹವಾದ ಕೆಲಸವನ್ನು ಮಾಡುತ್ತಿದೆ. ನಮ್ಮೂರಿನ ಗ್ರಾಮೀಣ ಭಾಗ ಮತ್ತು ಸಂಕಷ್ಟದಲ್ಲಿದ್ದ ಅರ್ಹ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿರುವುದು ಸಂಸ್ಥೆಯ ಸಾಮಾಜಿಕ ಕಳಕಳಿಯನ್ನು ತೋರಿಸುತ್ತದೆ ಎಂದರು.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆ ತನ್ನ ಸಿಎಸ್‌ಆರ್ ನಿಧಿಯನ್ನು ಶಿಕ್ಷಣ, ಆರೋಗ್ಯ ಮತ್ತು ಹಸಿವು ನಿಗಿಸುವ ಕೆಲಸಕ್ಕೆ ತೊಡಗಿಸಿಕೊಂಡು ಸಮಾಜದಲ್ಲಿ ಮಾದರಿ ಸಂಸ್ಥೆಯಾಗಿ ನಿಂತಿದೆ. ಈ ಸಂಸ್ಥೆಯ ಕಾರ್ಯ ಇತರೆ ಕಾರ್ಪೋರೇಟ್ ಸಂಸ್ಥೆಗಳಿಗೆ ಪ್ರೇರಣೆಯಾಗಲಿ. ದೇಶದ ಇನ್ನಷ್ಟು ಕಡೆಗಳಲ್ಲಿ ಶಾಖೆಗಳು ವಿಸ್ತರಿಸಿ ಆದಾಯವನ್ನು ವೃದ್ಧಿಸಿ ಸಮಾಜಮುಖಿ ಕಾರ್ಯಕ್ಕೆ ವಿನಿಯೋಗಿಸುವಂತಾಗಲಿ ಎಂದು ಶುಭಹಾರೈಸಿದರು.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ಮುಖ್ಯಸ್ಥ ಹಫೀಜ್ ರೆಹಮಾನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಉಡುಪಿ ಜಿಲ್ಲೆಯ 328 ವಿದ್ಯಾರ್ಥಿನಿಯರಿಗೆ ಒಟ್ಟು 28 ಲಕ್ಷ ರೂ. ವಿದ್ಯಾರ್ಥಿ ವೇತನವನ್ನು ವಿತರಿಸಲಾಗಿದೆ. ಕಳೆದ 7 ವರ್ಷಗಳಲ್ಲಿ 1500 ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನವನ್ನು ನೀಡಿರುವ ಸಂತೃಪ್ತಿ ನಮ್ಮದ್ದು. ಕಳೆದ 2 ವರ್ಷದಿಂದ ಜಿಲ್ಲೆಯಲ್ಲಿ ಬೆಳಗ್ಗಿನ ತಿಂಡಿ-ತಿನಿಸುಗಳ ಪ್ಯಾಕೇಟ್ ಹಂಚುತ್ತಿದ್ದೇವೆ ಎಂದರು.
ಪ್ರಸಕ್ತ ಹಣಕಾಸು ವರ್ಷದಲ್ಲಿ 16 ಕೋಟಿ ರೂ. ಮೊತ್ತದೊಂದಿಗೆ ಭಾರತದಾದ್ಯಂತ 21,000 ವಿದ್ಯಾರ್ಥಿ ನಿಯರಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತೇವೆ. ಕಳೆದ ವರ್ಷ 17,000 ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಕಲ್ಪಿಸಿದ್ದೇವೆ. ರಾಜ್ಯದಲ್ಲಿ ಈ ವರ್ಷ 5501 ಮಂದಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, 4.74 ಕೋಟಿ ರೂ. ಮೊತ್ತ ವಿನಿಯೋಗಿಸಲಾಗುತ್ತದೆ. ಇದು 491 ಕಾಲೇಜುಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.
ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಬೀದಿಬದಿಯಲ್ಲಿ ವಾಸಿಸುತ್ತಿರುವ ನಿರ್ಗತಿಕ ಮಹಿಳೆಯರ ಆರೈಕೆ ಮತ್ತು ರಕ್ಷಣೆಗಾಗಿ ಎರಡು ಅಜ್ಜಿ ಮನೆಗಳನ್ನು ಸ್ಥಾಪಿಸಲಾಗಿದೆ. ಶಾಲೆ ಬಿಟ್ಟ ಹಾಗೂ ಎಂದಿಗೂ ಶಾಲೆಗೆ ದಾಖಲಾಗದ ಮಕ್ಕಳಿಗಾಗಿ 12 ರಾಜ್ಯಗಳಲ್ಲಿ 581 ಮೈಕ್ರೋ ಲರ್ನಿಂಗ್ ಸೆಂಟರ್‌ಗಳನ್ನು ಸ್ಥಾಪಿಸ ಲಾಗಿದೆ. 25,800 ಕ್ಕೂ ಹೆಚ್ಚು ಮಕ್ಕಳನ್ನು ತಲುಪಿದ್ದೇವೆ. ಶಾಲೆಯಿಂದ ಹೊರಗುಳಿದ 9000 ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಉಡುಪಿ ಜಿಲ್ಲೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮೊಹಮ್ಮದ್ ಮೌಲಾ, ಸಾಫಲ್ಯ ಟ್ರಸ್ಟ್‌ನ ಪ್ರವರ್ತಕಿ, ಉದ್ಯಮಿ ನಿರುಪಮಾ ಪ್ರಸಾದ್ ಶೆಟ್ಟಿ, ಫಾ. ವಿಲಿಯಂ ಮಾರ್ಟಿಸ್, ಮುಖಂಡ ಕಿಶನ್ ಹೆಗ್ಡೆ ಕೊಳ್ಕೆಬೈಲು, ವೆಂಕಟೇಶ್ ಪೈ, ಸಾಮಾಜಿಕ ಕಾರ್ಯ ಕರ್ತರಾದ ಮಮತಾ ಶೆಟ್ಟಿ, ರೇಷ್ಮಾ ತೋಟ ಉಪಸ್ಥಿತರಿದ್ದರು.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ಸಿಎಸ್‌ಆರ್ ನಿಧಿ ಕರ್ನಾಟಕ ಪ್ರಾದೇಶಿಕ ಮುಖ್ಯಸ್ಥ ಹೈದರ್ ಕೆ., ಶಾಖಾ ವ್ಯವಸ್ಥಾಪಕ ಪುರಂದರ ತಿಂಗಳಾಯ, ಜಿಆರ್‌ಎಂ ರಾಘವೇಂದ್ರ ನಾಯಕ್ ಅಜೆ ಕಾರು, ಸೇಲ್ಸ್ ಮ್ಯಾನೇಜರ್ ಮುಸ್ತಾಫಾ ಎ.ಕೆ., ಮಾರುಕಟ್ಟೆ ವ್ಯವಸ್ಥಾಪಕ ತಂಝೀಮ್ ಶಿರ್ವ ಸಹಕರಿಸಿದರು. ವಿಘ್ನೇಶ್ ಸನ್ಮಾನಿತರ ಪಟ್ಟಿಯನ್ನು ವಾಚಿಸಿದರು.