ಉಡುಪಿ : ಹಳೆ ಬೇರು ಹೊಸ ಚಿಗುರು ಎಂಬoತೆ ಯಕ್ಷಗಾನ ಕೂಡಾ ಹೊಸತನವನ್ನು ಬೆಳೆಸಿಕೊಂಡು ತನ್ನ ಸಂಪ್ರದಾಯಿಕ ಚೌಕಟ್ಟಿನಲ್ಲಿಯೇ ಬೆಳೆದರೆ ಅದು ಜನಾನುರಾಗಿಯಾಗುತ್ತದೆ. ಆಧುನಿಕತೆಯ ಹೆಸರಿನಲ್ಲಿ ಪ್ರೇಕ್ಷಕರನ್ನು ರಂಜಿಸುವ ಧಾವಂತದಲ್ಲಿ ಕಲಾವಿದ ಹೆಜ್ಜೆ ತಪ್ಪಬಾರದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಭಾನುವಾರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಳದ ಸಭಾಂಗಣದಲ್ಲಿ ಕುಂದಾಪುರದ ನಾದಾವಧಾನ ಪ್ರತಿಷ್ಠಾನದ ವತಿಯಿಂದ ಆನ್‌ಲೈನ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಎರಡು ದಿನಗಳ ವಿಶೇಷ ಯಕ್ಷಗಾನ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
ಪ್ರೇಕ್ಷಕರನ್ನು ರಂಜಿಸಿ, ಚಪ್ಪಾಳೆಗಿಟ್ಟಿಸುವ ಭರದಲ್ಲಿ ಕಲಾವಿದರು ರಾಜಕೀಯ ಸೇರಿದಂತೆ ಅನಗತ್ಯ ವಿಷಯಗಳನ್ನು ಪ್ರಸ್ತಾಪಿಸುವುದು, ಸಹ ಕಲಾವಿದರ ಮೇಲೆ ಮಾತಿನ ದಾಳಿಯ ಮೂಲಕ ಕುಂದುoಟು ಮಾಡುವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವ ಬಗ್ಗೆ ಅಕಾಡೆಮಿಗೂ ದೂರುಗಳು ಬಂದಿವೆ. ಆದರೆ ಇಂತಹ ಅತಿರೇಕದ ವರ್ತನೆಗಳನ್ನು ಸರಿ ಮಾಡುವ ಶಕ್ತಿ ಹೊಂದಿರುವುದು ಯಕ್ಷಗಾನದ ಅಭಿಮಾನಿ (ಪ್ರೇಕ್ಷಕ)ಗಳಿಂದ ಮಾತ್ರ ಸಾಧ್ಯವಾದ ಕೆಲಸ. ಪ್ರೇಕ್ಷಕರು ಅಲ್ಲಿಯೇ ತಮ್ಮ ವಿರೋಧವನ್ನು ವ್ಯಕ್ತ ಪಡಿಸಿದರೆ ಇಂತಹ ಆಭಾಸಗಳು ಮುಂದೆ ನಡೆಯುವ ಪ್ರಮೇಯವೇ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಯಕ್ಷಗಾನ ಅಕಾಡೆಮಿಯಿಂದ ಹಿರಿಯ ಸಾಧನೆ ಮಾಡಿದ, ಯಕ್ಷಗಾನಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ನೇಪಥ್ಯ ಸೇರಿರುವ ಹಿರಿಯ ಕಲಾವಿದರನ್ನು ಗುರುತಿಸಬೇಕು, ಗೌರವಿಸಬೇಕು ಎಂಬುದು ತನ್ನ ಸದಾಶಯವಾಗಿದೆ. ಇದನ್ನೇ ನಾನು ಅಕಾಡೆಮಿ ಅಧ್ಯಕ್ಷನಾಗಿಯೂ ಮುಂದುವರಿಸಿದ್ದೇನೆ. ಯಕ್ಷಗಾನ ಇಷ್ಟೊಂದು ಮಟ್ಟದಲ್ಲಿ ಇಂದು ಜನಪ್ರಿಯತೆ ಉಳಿಸಿಕೊಳ್ಳಲು ಆ ಹಿರಿಯ ಮಹಾನ್ ಚೇತನಗಳ ಸಮರ್ಪಣಾ ಕೆಲಸವೇ ಕಾರಣ. ಹೀಗಾಗಿ ಹಿರಿಯ ಕಲಾವಿದರನ್ನು ಮರೆಯುವ ಪ್ರಶ್ನೆಯೇ ಇಲ್ಲ. ಹೊಸತನ್ನು ಅಳವಡಿಸಿಕೊಳ್ಳುವ ಭರದಲ್ಲಿ ನಾವು ಕಲೆಯ ಪ್ರಾಚೀನ ಔನತ್ಯವನ್ನು ನಾವು ಎಂದೂ ಮರೆಯಬಾರದು ಎಂದು ಅವರು ಕಿವಿ ಮಾತು ಹೇಳಿದರು.
ಯಕ್ಷಗಾನ ಕಲೆಯ ಉಳಿವು, ಬೆಳವಣಿಗೆಗಾಗಿ ಈ ಕಲೆಯನ್ನು ಮಕ್ಕಳಿಗೆ ದಾಟಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ನಾನು ಉಡುಪಿಯ ಯಕ್ಷಗಾನ ಕಲಾರಂಗದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಪ್ರಾರಂಭಗೊoಡ ಶಾಲಾ ಮಕ್ಕಳಿಗೆ ಯಕ್ಷ ಶಿಕ್ಷಣ ಇದು ಬೆಳೆದು ಹೆಮ್ಮರವಾಗಿದೆ. ಉಡುಪಿ ಜಿಲ್ಲೆಯ ೯೦ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳ ೩,೦೦೦ ಕ್ಕೂ ಅಧಿಕ ವಿದ್ಯಾರ್ಥಿಗಳು ಇಂದು ಯಕ್ಷಗಾನವನ್ನು ಕಲಿಯುತ್ತಿರುವುದು ಒಂದು ದೊಡ್ಡ ಸಾಧನೆಯೇ ಸರಿ. ಇದೀಗ ರಂಗಭೂಮಿ ಉಡುಪಿ ಅಧ್ಯಕ್ಷನಾಗಿ, ರಂಗ ಶಿಕ್ಷಣವನ್ನು ಮಕ್ಕಳಿಗೆ ಹೇಳಿಕೊಡುವ ನಿಟ್ಟಿನಲ್ಲಿ ಯಕ್ಷ ಶಿಕ್ಷಣದಂತೆಯೇ ಶಾಲಾ ಕಾಲೇಜುಗಳಲ್ಲಿ ನಾಟಕ ತರಬೇತಿಗಳನ್ನು ಆರಂಭಿಸಲಾಗಿದೆ ಎಂದು ಅವರು ವಿವರಿಸಿದರು.
ಹಿಂದಿನವರಲ್ಲಿ ಬಹಳಷ್ಟು ಮಂದಿ ಕಲಾವಿದರು ಹೊಟ್ಟೆಪಾಡಿಗೆ ಯಕ್ಷಗಾನವನ್ನು ಕಲಿತು ಮುಂದೆ ದೊಡ್ಡ ಕಲಾವಿದರಾಗಿ ಬೆಳೆದಿದ್ದಾರೆ. ಆದರೆ ಇಂದಿನ ವಿದ್ಯಾವಂತರಿಗೆ ಅವರು ಅನಿಭವಿಸಿದ ಸಂಕಷ್ಟ, ಕಟ್ಟುಪಾಡುಗಳ ಬಗ್ಗೆ ಅರಿವಿಲ್ಲ. ಅವರಿಗೆ ಹಿರಿಯರಿಗೆ ಗೌರವ ಕೊಡುವುದು ಬೇಕಾಗಿಯೇ ಇಲ್ಲ. ಗುರು ಮೂಲಕವೇ ಕಲೆ ಹಸ್ತಾಂತರವಾದರೆ ಮಾತ್ರ ಅದು ಪೂರ್ಣವಾಗುತ್ತದೆ. ಹಾಗಾಗಿ ಕಲಾವಿದ ತನ್ನ ಅಹಂನ್ನು ಮರೆತು ನಿರಂತರ ಕಲೆಯನ್ನು ಅಭ್ಯಾಸಿಸುವ ಮನೋಭಾವ ಹೊಂದಿದ್ದರೆ ಅದರಿಂದ ಕಲಾವಿದನಿಗೂ, ಕಲೆಗೂ ಲಾಭವಾಗುತ್ತದೆ. ಯಕ್ಷಗಾನ ಹಾದಿ ತಪ್ಪುತ್ತಿದೆ ಎಂಬ ಟೀಕೆಗಳು ಬಾರದಂತಾಗುತ್ತವೆ ನಾನು ಎಂಬುದು ಹೋದರೆ ನಾನು ಬೆಳೆದೇನು ಎಂಬುದನ್ನು ಕಲಾವಿದರು ಅರಿತುಕೊಳ್ಳಬೇಕು ಎಂದು ಅವರು ಮಾರ್ಮಿಕವಾಗಿ ನುಡಿದರು.
ಖ್ಯಾತ ವೈದ್ಯ ಹಾಗೂ ಕಲಾಪೋಷಕ ಡಾ.ಜಗದೀಶ್ ಶೆಟ್ಟಿ ಅವರು ಮಾತನಾಡಿ, ಕಲಾವಿದರು ತಾನು ಕಲಿತದ್ದಾಗಿದೆ ಎಂಬ ಮನೋಭಾವವನ್ನು ಬಿಟ್ಟು, ತನಗಿನ್ನೂ ಕಲಿಯಲಿಕ್ಕಿದೆ ಎಂಬ ಮನೋಭಾವ ತಳೆದರೆ ಅವರಿಗೆ ಇನ್ನಷ್ಟು ಬೆಳೆಯುವ ಅವಕಾಶ ಲಭ್ಯವಾಗುತ್ತದೆ. ಯಕ್ಷಗಾನಕ್ಕೆ ಯಾವುದು ಅಗತ್ಯವೋ ಅದನ್ನು ಮಾತ್ರ ಕಲಿಸುವ ನಾದಾವಧಾನ ಸಂಸ್ಥೆಯ ಕಾರ್ಯ ಮಾದರಿಯಾಗಿದೆ. ಇಂತಹ ಕಾರ್ಯಕ್ರಮಗಳು ಎಲ್ಲೆಡೆಯೂ ನಡೆಯಲಿ ಎಂದು ಹಾರೈಸಿದರು.
ಸಂಪನ್ಮೂಲ ವ್ಯಕ್ತಿ ಅಜಿತ್ ಕಾರಂತ ಬೆಂಗಳೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅನೇಕ ಸಂಘ ಸಂಸ್ಥೆಗಳಿಗೆ ಆಶ್ರಯದಾತರಾಗಿ ಉದಾರವಾದ ಕೊಡುಗೆಗಳನ್ನು ನೀಡಿದ ಡಾ.ತಲ್ಲೂರು ಅವರು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಹಾಗೆಯೇ ಈ ಕಾರ್ಯಾಗಾರದ ರೂವಾರಿ ಎನ್.ಜಿ.ಹೆಗಡೆ ಯಲ್ಲಾಪುರ ಅವರು ಆನ್‌ಲೈನ್ ಮೂಲಕ ಯಕ್ಷಗಾನ ತರಬೇತಿ ಕಾರ್ಯಕ್ರಮವನ್ನು ಹುಟ್ಟುಹಾಕಿ ಅನೇಕ ಮಂದಿ ಶಿಷ್ಯರನ್ನು ತಯಾರು ಮಾಡಿ, ಯಕ್ಷಗಾನವನ್ನು ಅಭ್ಯಾಸಿಸುವಂತೆ ಮಾಡುವ ಮೂಲಕ ಒಂದು ಅಕಾಡೆಮಿ ಮಾಡುವ ಕಾರ್ಯವನ್ನು ಮಾಡುತ್ತಿರುವುದು ಅಭಿನಂದನೀಯ ಎಂದರು. ಸಿನೆಮಾ ಸಾಹಿತ್ಯ, ನಾಟಕ ಸಾಹಿತ್ಯ, ವಾಟ್ಸಾಪ್, ಫೇಸ್‌ಬುಕ್ ಸಾಹಿತ್ಯದಿಂದ ಯಕ್ಷಗಾನ ಶ್ರೀಮಂತವಾಗಬೇಕೆ ಆದರೆ ಕಲಾವಿದರಿಗೆ ಇದರ ಪ್ರಜ್ಞೆ ಇಲ್ಲ. ನಾವು ಇಂದು ಯಕ್ಷಗಾನದಲ್ಲಿ ಕೇಳುತ್ತಿರುವುದು, ನೋಡುತ್ತಿರುವುದು ಇಂತಹ ಧೃಶ್ಯಗಳನ್ನೇ, ಇಂತಹ ಮಾತುಗಳನ್ನೇ. ಇಂತಹ ಸಂಕ್ರಮಣ ಸ್ಥಿತಿಯಲ್ಲಿ ನಾವಿರುವಾಗ ಯಕ್ಷಗಾನದ ಮಟ್ಟು, ತಿಟ್ಟುಗಳ ಬಗ್ಗೆ ತಿಳಿಸಿಕೊಡುವುದು ಸಮಾಧಾನ ತಂದಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚುಹೆಚ್ಚಾಗಿ ನಡೆಯುವ ಅಗತ್ಯವಿದೆ ಎಂದರು.
ಯಕ್ಷಗಾನ ಗುರು ಅನಂತಪದ್ಮನಾಭ ಪಾಟಕ್ ಪುಣೆ, ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರದೀಪ್ ಯಡಿಯಾಳ್, ಕಲಾವಿದ ಸಂಪತ್ ಕನ್ನಂತ, ಬಾಲಚಂದ್ರ ಭಟ್ ಉಪಸ್ಥಿತರಿದ್ದರು.
ಯಕ್ಷಗಾನದ ಅರ್ಥಧಾರಿ ಸತೀಶ್ ಮೂಡುಬಗೆ ಯಕ್ಷಗಾನವನ್ನು ಆನ್‌ಲೈನ್ ಮೂಲಕ ಆರಂಭಿಸಿರುವುದು ಸಂದರ್ಭೋಚಿತ ಕಾರ್ಯ ಎಂದು ಶ್ಲಾಘಿಸಿದರು. ಕಾರ್ಯಕ್ರಮದ ಸಂಯೋಜಕ ಎನ್.ಜೆ.ಹೆಗಡೆ ಯಲ್ಲಾಪುರ ವಂದಿಸಿದರು.