ಯಕ್ಷಗಾನ ರಂಗದ ಬಡಗು ತಿಟ್ಟಿನ ಮೇರು ಕಲಾವಿದ ಕೆಪ್ಪೆಕೆರೆ ಮಹಾದೇವ ಹೆಗಡೆ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಹೊನ್ನಾವರ ತಾಲೂಕಿನ ಹಡಿನಬಾಳ ಎಂಬಲ್ಲಿ 1950ರಲ್ಲಿ ಈಶ್ವರ ಹೆಗಡೆ ಮತ್ತು ಗೋಪಿ ದಂಪತಿಗಳ ಪುತ್ರನಾಗಿ ಜನಿಸಿದ ಮಹಾದೇವ ಹೆಗಡೆಯವರು ತನ್ನ 18ನೇ ವಯಸ್ಸಿನಲ್ಲಿ ಬಣ್ಣದ ಲೋಕ ಪ್ರವೇಶಿಸಿದ್ದರು. ಹೆಗಡೆಯವರ ಕುಟುಂಬವೇ ಯಕ್ಷಗಾನ ರಂಗದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಗಣನೀಯ ಕೊಡುಗೆ ನೀಡಿತ್ತು.
ಭೀಮ, ವಲಲ, ಸುಗ್ರೀವ, ವಾಲಿ, ರಾಮ, ಮಹೋಗ್ರ, ಜಮದಗ್ನಿ, ರಾವಣ, ಮಾಗದ, ಹರಿಶ್ಚಂದ್ರ, ವಿಶ್ವಾಮಿತ್ರ ಮುಂತಾದ ಪಾತ್ರಗಳ ಮೂಲಕ ಕಲಾಸೇವೆಗೈದ ಕಪ್ಪೆಕೆರೆ ಮಹಾದೇವ ಹೆಗಡೆ ನಿಧನದಿಂದ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ ಕುಟುಂಬ ಬಳಗದವರಿಗೆ ನೀಡಲೆಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿಯವರು ಸಂತಾಪ ಸೂಚಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.