ಮಲ್ಪೆ : ಉಡುಪಿ ಧರ್ಮಪ್ರಾಂತ್ಯದಲ್ಲಿ 2025 ಸಾಮಾನ್ಯ ಜುಬಿಲಿ ವರ್ಷದ ಅಂಗವಾಗಿ ಸ್ವಂತ ಮನೆ ಇಲ್ಲದ ಕುಟುಂಬಕ್ಕೆ ಮನೆ ನಿರ್ಮಿಸುವ ವಿಶೇಷ ಯೋಜನೆಯ ಅಂಗವಾಗಿ ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ಬುಧವಾರ ಚರ್ಚ್ ವ್ಯಾಪ್ತಿಯ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಾಣ ಕಾರ್ಯದ ಭೂಮಿ ಪೂಜೆಯ ಅಡಿಗಲ್ಲು ಆಶೀರ್ವಚನ ಕಾರ್ಯ ಜರುಗಿತು.
ಶಿವಮೊಗ್ಗ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಫ್ರಾನ್ಸಿಸ್ ಸೆರಾವೊ ಮನೆ ನಿರ್ಮಾಣ ಅಡಿಗಲ್ಲು ಆಶೀರ್ವಚನ ನೇರವೇರಿಸಿದರು.
ಈ ವೇಳೆ ಮಾತನಾಡಿದ ಅವರು ಈ ಜಗತ್ತಿನಲ್ಲಿ ನಾವು ವಿವಿಧ ರೀತಿಯ ದಾನಗಳನ್ನು ಕಾಣುತ್ತೇವೆ. ವಸ್ತು ರೂಪದಲ್ಲಿ ದಾನ ನೀಡುವುದು, ಅಂಗಾಂಗ ದಾನ ಹಾಗೂ ಶರೀರದ ದಾನ. ಪ್ರತಿಯೊಂದು ದಾನವೂ ಕೂಡ ದೇವರಿಗೆ ಪ್ರಿಯವಾದುದಾಗಿದೆ. ತೊಟ್ಟಂ ಅನ್ನಮ್ಮ ದೇವಾಲಯದಲ್ಲಿ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಾಣ ಮಾಡಿ ಕೊಡುವ ಮೂಲಕ ಒಂದು ಉತ್ತಮವಾದ ದಾನವನ್ನು ನೀಡುವ ಮೂಲಕ ಮಾದರಿ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮನೆ ನಿರ್ಮಾಣಕ್ಕೆ 5 ಸೆಂಟ್ಸ್ ಜಾಗವನ್ನು ಉಚಿತವಾಗಿ ನೀಡಿರುವ ತೋಮಸ್ ಮತ್ತು ವಲೇರಿಯಾನ ನೊರೊನ್ಹಾ ದಂಪತಿಗಳನ್ನು ಧರ್ಮಾಧ್ಯಕ್ಷರು ಚರ್ಚಿನ ಪರವಾಗಿ ಸನ್ಮಾನಿಸಿದರು.
ಈ ವೇಳೆ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಸುನೀಲ್ ಫೆರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫೆರ್ನಾಂಡಿಸ್ ಹಾಗೂ ಇತರರು ಉಪಸ್ಥಿತರಿದ್ದರು.