ಉಡುಪಿ : ಮಳೆಗೆ ನಗರದ ಹಲವು ರಸ್ತೆಗಳು ಹದಗೆಟ್ಟಿದ್ದು ಸವಾರರು ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಾ ಮುಂದೆ ಸಾಗುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಡಾಂಬರೀಕರಣ ಮಾಡಿದ್ದ ರಸ್ತೆಗಳೂ ಹದಗೆಟ್ಟಿದ್ದು ಹೊಂಡಗಳಿಂದ ಕೂಡಿವೆ. ನಗರದ ಬ್ರಹ್ಮಗಿರಿಯಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆವರೆಗಿನ ಮುಖ್ಯ ರಸ್ತೆ ಕೆಲವು ತಿಂಗಳುಗಳ ಹಿಂದೆಯಷ್ಟೆ ಡಾಂಬರೀಕರಣಗೊಂಡಿತ್ತು. ಇದೀಗ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ಎದುರಾಗಿದೆ.

ನಗರಸಭೆ ಪರ್ಯಾಯ ಮಹೋತ್ಸವದ ಅನುದಾನವಾಗಿ ಈ ರಸ್ತೆಗೆ 35 ಲಕ್ಷ ಹಣ ಮಂಜೂರು ಮಾಡಿತ್ತು. ಗುತ್ತಿಗೆದಾರ ಕಳಪೆ ಕಾಮಗಾರಿ ನಡೆಸಿ, ಇತ್ತೀಚೆಗೆ ಅದರ ಮೇಲೆ ತೇಪೆ ಹಚ್ಚಿಸಿದ್ದರು. ಇದರ ವಿರುದ್ಧ ಸಮಾಜಸೇವಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೂ ಮುಂದಾಗಿದ್ದರು.
ಇಂದು ನಗರಸಭೆ ಆಯುಕ್ತ ರಾಯಪ್ಪ ನೇತೃತ್ವದಲ್ಲಿ ಈ ರಸ್ತೆಯ ತೇಪೆಯನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.ಬಳಿಕ ಮಾತನಾಡಿ, ಮಳೆ ಮುಗಿದ ತಕ್ಷಣ ಈ ರಸ್ತೆಯನ್ನು ವೈಜ್ಞಾನಿಕವಾಗಿ ಮತ್ತೆ ಮಾಡಿಕೊಡಬೇಕು. ಗುತ್ತಿಗೆದಾರನ 45 ಲಕ್ಷ ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಸಂಪೂರ್ಣ ವೈಜ್ಞಾನಿಕ ರೀತಿಯಲ್ಲಿ ರಸ್ತೆ ಮಾಡಿದ ನಂತರ ಅವರ ಹಣ ಕೊಡಲಾಗುವುದು, ಇದು ಎಲ್ಲ ಗುತ್ತಿಗೆದಾರರಿಗೂ ಎಚ್ಚರಿಕೆ ಎಂದು ಹೇಳಿದ್ದಾರೆ.