ಉಡುಪಿ : ತುರ್ತು ಪರಿಸ್ಥಿತಿ ಹೇರಲು ತಂದ ತಿದ್ದುಪಡಿಗಳು ಸಂವಿಧಾನದ ಆಶಯವನ್ನೇ ಬುಡಮೇಲು ಮಾಡಿತು. ಕಾಂಗ್ರೆಸ್ ಪ್ರತಿ ಬಾರಿಯೂ ತನ್ನ ಸ್ವಾರ್ಥಕ್ಕೋಸ್ಕರ ಸಂವಿಧಾನ ತಿದ್ದುಪಡಿ ಮಾಡಿತು.
ಬಿಜೆಪಿ ಸರಕಾರ ಇದ್ದಾಗ ಎಸ್ಸಿ, ಎಸ್ಟಿ ಹಿತಾಸಕ್ತಿಗೆ ಪೂರಕವಾಗಿ ಮಹಿಳಾ ಮೀಸಲಾತಿಗಾಗಿ ಜಿಎಸ್‌ಟಿ ಜಾರಿ ಮಾಡುವ ಸಲುವಾಗಿ ತಂದ ತಿದ್ದುಪಡಿ ಆಗಿತ್ತು. ಈ ಎಲ್ಲಾ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುವ ಸಲುವಾಗಿ ಪ್ರತೀ ಜಿಲ್ಲೆಯಲ್ಲಿ ಸಂವಿಧಾನ ಸಮ್ಮಾನ ಕಾರ್ಯಕ್ರಮ ಅಯೋಜಿಸಲಾಗಿದೆ. ಜನವರಿ 11ರಂದು ಉಡುಪಿಯ ಪುರ ಭವನದಲ್ಲಿ ಬೆಳಿಗ್ಗೆ 11.00ಕ್ಕೆ ನಡೆಯುವ ಕಾರ್ಯಕ್ರಮಕ್ಕೆ ತಮಿಳುನಾಡು ಬಿಜೆಪಿ ಅಧ್ಯಕ್ಷರಾದ ಅಣ್ಣಾಮಲೈ ಆಗಮಿಸಲಿದ್ದಾರೆ ಎಂದು ಸಂವಿಧಾನ ಸಮ್ಮಾನ ಸಮಿತಿಯ ವಿಭಾಗ ಸಂಚಾಲಕರಾದ ಕೆ. ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನವಂಬರ್ 26, 1949 ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ಭಾರತದ ಸಂವಿಧಾನ ಸಂಸತ್ತಿನಲ್ಲಿ ಅಂಗೀಕಾರವಾದ ದಿನ. 2015ರಿಂದ ಆ ದಿನವನ್ನು ಸಂವಿಧಾನ ದಿನವೆಂದು ಪ್ರಧಾನಿ ಮೋದಿ ಘೋಷಣೆ ಮಾಡಿ ಆಚರಣೆಗೆ ತಂದರು. ಸಂವಿಧಾನ ರಕ್ಷಕರೆಂದು ಬೊಬ್ಬಿಡುವ ಕಾಂಗ್ರೆಸ್ ಪಕ್ಷ ಸಂವಿಧಾನ ವಿರೋಧಿಯಾಗಿ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿ ಕೆಲಸ ಮಾಡಿದೆ ಎಂಬ ಸತ್ಯ ಸಂಗತಿಯನ್ನು ಜನರ ಮುಂದಿಡುವ ಸಲುವಾಗಿ ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್ ಮತ್ತು ದಲಿತ ಹಿಂದುಳಿದ ವರ್ಗಗಳ ಸಂಘಟನೆಗಳ ಸಹಯೋಗದಲ್ಲಿ ನವೆಂಬರ್ 26ರಿಂದ ಜನವರಿ 26ರವರೆಗೆ 2 ತಿಂಗಳ ಕಾಲ ರಾಜ್ಯಾದ್ಯಂತ ಸಂವಿಧಾನ ಸಮ್ಮಾನ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.