Sunday, January 19, 2025
Banner
Banner
Banner
Home » ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವುದು ಸಮಾಜದ ಕರ್ತವ್ಯ : ಡಾ.ಎಚ್.ಎಸ್.ಬಲ್ಲಾಳ್

ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವುದು ಸಮಾಜದ ಕರ್ತವ್ಯ : ಡಾ.ಎಚ್.ಎಸ್.ಬಲ್ಲಾಳ್

by NewsDesk

ಉಡುಪಿ : ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಹಮ್ಮಿಕೊಳ್ಳುತ್ತಿರುವ ಪೂರಕ ಕಾರ್ಯಕ್ರಮಗಳು ಪ್ರಶಂಸನೀಯ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಂಸ್ಥೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಅಭಿಪ್ರಾಯ ಪಟ್ಟರು.

ಅವರು ಶನಿವಾರ ಗುಂಡ್ಮಿ ಸಾಲಿಗ್ರಾಮದ ಸದಾನಂದ ರಂಗಮoಟಪದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಯಕ್ಷಗಾನ ಕಲಾ ಕೇಂದ್ರ ಹಂಗಾರಕಟ್ಟೆ ಗುಂಡ್ಮಿ ಇವರ ಸಹಯೋಗದೊಂದಿಗೆ ಹಮ್ಮಿಕೊಂಡ 2 ದಿನಗಳ ನಡೆಯುವ ‘ಯಕ್ಷಗಾನ ಬಣ್ಣಗಾರಿಕೆ ಮತ್ತು ವೇಷಗಾರಿಕೆ ಕಾರ್ಯಾಗಾರ’ವನ್ನು ಉದ್ಘಾಟಿಸಿ, ಮಾತನಾಡಿದರು.

ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿರುವ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಯಕ್ಷಗಾನ ಕಲೆ ಹಾಗೂ ಕಲಾವಿದರ ಮೇಲಿನ ಪ್ರೀತಿಯನ್ನು ಕಂಡು ಅಚ್ಚರಿಪಟ್ಟಿದ್ದೇನೆ. ಅವರ ಸಮರ್ಥ ಮಾರ್ಗದರ್ಶನದಲ್ಲಿ ಅಕಾಡೆಮಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಲ್ಲಿ ಸಂಶಯವಿಲ್ಲ. ನಾನು, ನನ್ನ ತಂದೆ ಯಕ್ಷಗಾನದ ದೊಡ್ಡ ಅಭಿಮಾನಿಗಳು. ಯಕ್ಷಗಾನದಂತಹ ಶ್ರೀಮಂತ ಕಲೆಯನ್ನು ಉಳಿಸಬೇಕು, ಬೆಳೆಸಬೇಕು ಎನ್ನುವ ಉದ್ದೇಶದಿಂದ ಮಾಹೆ ವತಿಯಿಂದ ಯಕ್ಷಗಾನ ಕೇಂದ್ರವನ್ನು ನಡೆಸಲಾಗುತ್ತಿದೆ. ಸುಮಾರು 3೦೦೦೦ಕ್ಕೂ ಅಧಿಕ ದೇಶ ವಿದೇಶಗಳ ಯಕ್ಷಗಾನ ಆಸಕ್ತರು ಇಲ್ಲಿಗೆ ಬಂದು ಯಕ್ಷಗಾನವನ್ನು ಕಲಿತಿದ್ದಾರೆ. ಅಲ್ಲದೆ ಆಸಕ್ತ ಮಕ್ಕಳಿಗೆ ಹಾಸ್ಟೆಲ್‌ನ್ನು ಒದಗಿಸಿ ಅವರ ವಿದ್ಯಾರ್ಜನೆ ಜೊತೆಗೆ ಯಕ್ಷ ಶಿಕ್ಷಣವನ್ನು ಕಲಿಯುವಂತೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿರುವ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ಮಕ್ಕಳಿಗೆ ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಮೂಡಿಸಿ ಭವಿಷ್ಯದ ಕಲಾವಿದರು ಹಾಗೂ ಕಲಾಪ್ರೇಮಿಗಳನ್ನು ರೂಪುಗೊಳಿಸಬೇಕು ಎನ್ನುವುದೇ ಅಕಾಡೆಮಿಯ ಮಹಾತ್ವಾಕಾಂಕ್ಷೆ. ಈ ನಿಟ್ಟಿನಲ್ಲಿ ಯಕ್ಷಗಾನದ ವೇಷಭೂಷಣಗಳು, ಬಣ್ಣಗಾರಿಕೆ ಬಗ್ಗೆ ಮಕ್ಕಳಿಗೆ, ಕಲಾಸಕ್ತರಿಗೆ ಅರಿವು ಮೂಡಿಸಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಪ್ರಾಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಕಾಲ, ಕಲಾವಿದರು ಬದಲಾಗಬಹುದು. ಆದರೆ ಕಲೆಯ ಮೂಲ ಬದಲಾವಣೆಯಾಗಬಾರದು. ಅದು ಮೂಲ ಸಂಪ್ರದಾಯದಲ್ಲೇ ಉಳಿದು ಬೆಳೆಯಬೇಕು. ಇಂದಿನ ಯುವ ಪೀಳಿಗೆ ಯಕ್ಷಗಾನ, ಭಜನೆಯಂತಹ ಹವ್ಯಾಸಗಳಲ್ಲಿ ತೊಡಗಿಸಿಕೊಂಡರೆ ಸುಸಂಸ್ಕೃತ ಸಮಾಜದ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಅಕಾಡೆಮಿಯ ಅಧ್ಯಕ್ಷನಾಗಿದ್ದುಕೊಂಡು ಯಕ್ಷಗಾನ ಕಲೆ ಹಾಗೂ ಕಲಾವಿದರ ಶ್ರೇಯೋಭಿವೃದ್ಧಿಗೆ ಬೇಕಾದ ಎಲ್ಲಾ ಕಾರ್ಯಗಳನ್ನು ನಡೆಸಲಾಗುವುದು ಎಂದು ಅವರು ಭರವಸೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ನಮ್ಮಲ್ಲಿ ಯಕ್ಷಗಾನ, ತಾಳಮದ್ದಲೆ ಕಾರ್ಯಕ್ರಮಗಳು ಬಹಳಷ್ಟು ನಡೆಯುತ್ತಿರುತ್ತವೆ. ಆದರೆ ಇಂತಹ ವೇಷ ಮತ್ತು ಬಣ್ಣಗಾರಿಕೆ ಬಗ್ಗೆ ಕಮ್ಮಟ ನಡೆಯುತ್ತಿರುವುದು ಬಹಳ ವಿರಳ. ಇದಕ್ಕೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಅವರನ್ನು ಅಭಿನಂದಿಸಲೇ ಬೇಕು. ಅವರ ಉದ್ಯಮಿಯಾಗಿದ್ದರೂ, ಕಲೆ, ಸಂಸ್ಕೃತಿಗೆ ಅವರು ನೀಡುತ್ತಿರುವ ಪ್ರೋತ್ಸಾಹ ಅಭಿನಂದನೀಯ ಎಂದ ಅವರು, ಪೋಷಕರು ತಮ್ಮ ಮಕ್ಕಳಿಗೆ ಯಕ್ಷಗಾನ, ನೃತ್ಯ, ಸಂಗೀತ ಮೊದಲಾದ ಕಲೆಗಳನ್ನು ಸರಿಯಾಗಿ ಕಲಿಸಿದ ಮೇಲೆಯೇ ಅವರಿಗೆ ವೇದಿಕೆಯಲ್ಲಿ ಪ್ರದರ್ಶನಕ್ಕೆ ಅವಕಾಶ ಕೊಡಬೇಕು. ಪ್ರಸ್ತುತ ಯಕ್ಷಗಾನ ಅಕಾಡೆಮಿಗೆ ತಮ್ಮ ಜಿಲ್ಲೆಯವರೇ ಅಧ್ಯಕ್ಷರಾಗಿರುವುದು ಕಲೆಯ ಉಳಿವು ಬೆಳವಣಿಗೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಮಣಿಪಾಲದ ಮಾಹೆ ಕೂಡಾ ಡಾ.ಎಚ್.ಎಸ್.ಬಲ್ಲಾಳ್ ಅವರ ಮುತುವರ್ಜಿಯಲ್ಲಿ ಯಕ್ಷಗಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದಲ್ಲದೆ ಅಂತರಾಷ್ಟ್ರೀಯ ಮಟ್ಟಕ್ಕೂ ಯಕ್ಷಗಾನವನ್ನು ತಲುಪಿಸುವ ಕಾರ್ಯ ಮಾಡುತ್ತಿರುವುದು ಸಂತೋಷ ತಂದಿದೆ ಎಂದರು.

ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತಾ ಎನ್. ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಯಕ್ಷಗಾನಕ್ಕೆ ಪೂರಕವಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳ ಮೇಳ, ಮಹಿಳಾ ಯಕ್ಷಗಾನ ಆಯೋಜನೆ, ಪುಸ್ತಕ ಪ್ರಕಟನೆ, ಸಾಕ್ಷ್ಯ ಚಿತ್ರಗಳ ನಿರ್ಮಾಣ ಕಾರ್ಯವನ್ನು ಅಕಾಡೆಮಿ ವತಿಯಿಂದ ಸರಕಾರ ನೀಡುವ ಅನುದಾನವನ್ನು ಬಳಸಿಕೊಂಡು ಹಮ್ಮಿಕೊಳ್ಳಲಾಗುವುದು ಎಂದರು.

ಕಾರ್ಯಾಗಾರದಲ್ಲಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಗೆ ಬಣ್ಣಗಾರಿಕೆ ಮತ್ತು ವೇಷಗಾರಿಕೆಯನ್ನು ಹೇಳಿಕೊಡಲು ಸಂಪನ್ಮೂಲ ವ್ಯಕ್ತಿಗಳಾದ ಗಣೇಶ್ ಚೇರ್ಕಾಡಿ, ಗಣೇಶ್ ಜನ್ನಾಡಿ, ಮಿಥುನ್ ಬ್ರಹ್ಮಾವರ, ವೈಕುಂಠ ಹೇರ್ಳೆ, ಅಶೋಕ್ ಆಚಾರ್, ಕೂರಾಡಿ ರಾಮ ಬಾಯರಿ, ಶ್ರೀಕಾಂತ ವಡ್ಡರ್ಸೆ, ಸೀತಾರಾಮ ಸೋಮಯಾಜಿ ಹಾಗೂ ವಿಭವನ್ ಗುಂಡ್ಮಿ ಉಪಸ್ಥಿತರಿದ್ದರು. ಯಕ್ಷಗಾನ ಕೇಂದ್ರದ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಹೆಬ್ಬಾರ್ ಸ್ವಾಗತಿಸಿದರು.

You may also like

Leave a Comment

Maax-Media-Logo

Maax News covers major news and events of Udupi district. This channel provides detailed reports on the political, social, economic, and cultural life of Udupi district.

Maax News, equipped with the most sophisticated studio in Udupi, assures people comprehensive news coverage.

Copyrights © maaxmedia.in All Rights Reserved. Designed by Sabweb