ಉಡುಪಿ : ಭಾರತೀಯ ಕಲಾಪ್ರಕಾರಗಳು ಕೇವಲ ಮನೋರಂಜನೆಗಾಗಿ ಅಲ್ಲ, ಅವು ಭಗವಂತನ ಜೊತೆ ಅನುಸಂಧಾನ ಮಾಡುವ ಮಾಧ್ಯಮವೂ ಹೌದು ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ಅವರು ಉಡುಪಿಯ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ‘ರಜತ ಸಂಭ್ರಮ’ ಮಹೋತ್ಸವದ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು. ಭಾರತದ ತಾಯಿ ಬೇರು ನಮ್ಮ ಕಲೆ, ಸಂಸ್ಕೃತಿಯ ಪರಂಪರೆಯಲ್ಲಿ ಭದ್ರವಾಗಿ ಅಡಗಿದೆ, ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಇಂತಹ ಸಂಸ್ಥೆಗಳಿಂದ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಬದಲಾವಣೆ ಬೇಕು ಎಂಬ ಪ್ರಜ್ಞೆ ಸಮಾಜದಲ್ಲಿ ಮೂಡುತ್ತಿರುವುದು ಸಂತಸದ ವಿಷಯ ಎಂದು ಅಭಿಪ್ರಾಯಪಟ್ಟರು.
ಉಡುಪಿಯ ಯಕ್ಷಗಾನ ಕಲಾರಂಗ-ಇನ್ಫೋಸಿಸ್ ಫೌಂಡೇಶನ್ (ಐವೈಸಿ) ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕೆ.ಆರ್. ರಾಘವೇಂದ್ರ ಆಚಾರ್ಯ ಮಣಿಪಾಲ ಅವರು ಪ್ರಾರ್ಥನ ಸ್ತುತಿಯೊಂದಿಗೆ ಆರಂಭಿಸಿದರು. ಈ ವೇಳೆ ಉಡುಪಿಯ ಸಾಂಸ್ಕೃತಿಕ ಸಂಸ್ಥೆಗಳ ಖಜಾಂಜಿಯಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ| ಕೆ. ಸದಾಶಿವ ರಾವ್ ಅವರಿಗೆ ‘ಕಲಾಪೋಷಕ’ ಗೌರವಾರ್ಪಣೆಯನ್ನು ನೀಡಲಾಯಿತು. ಉಡುಪಿ ಯಕ್ಷಗಾನ ಕಲಾರಂಗದ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಳಿಕ ಕೆ.ಎಸ್. ವಿಷ್ಣುದೇವ್ ಅವರಿಂದ ರಾಗಂ..ತಾನಂ…ಪಲ್ಲವಿ ಸಹಿತ ಕರ್ನಾಟಕ ಸಂಗೀತ ಕಛೇರಿ ನಡೆಯಿತು. ಅವರಿಗೆ ವಯೊಲಿನ್‌ನಲ್ಲಿ ವಿ.ಎಸ್. ಗೋಕುಲ್ ಆಲಂಗೋಡೆ, ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಹಾಗೂ ಘಟಂನಲ್ಲಿ ಶ್ರೀಜಿತ್ ವೆಲ್ಲತ್ತಂಜೂರ್ ಸಹಕರಿಸಿದರು. ಸರಿಗಮ ಭಾರತಿ ಸಂಗೀತ ವಿದ್ಯಾಲಯದ ನಿರ್ದೇಶಕ ಡಾ| ಉದಯಶಂಕರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಲಯದ ಗುರು ಉಮಾಶಂಕರಿ ವಂದನಾರ್ಪಣೆಗೈದರು.