ಮೂಡುಬಿದಿರೆ : ಔಷಧಾಲಯ ಅಥವಾ ಔಷಧ ವಿಜ್ಞಾನ ಎಂಬುದು ಕೇವಲ ಕುಳಿತು ಮಾಡುವ ವ್ಯಾಪಾರಿ ವೃತ್ತಿಯಲ್ಲ, ಅದು ವೈದ್ಯರು ಮತ್ತು ರೋಗಿಗಳ ಮಧ್ಯದ ಸೇತು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಹೇಳಿದರು.
ಆಳ್ವಾಸ್ ಕಾಲೇಜಿನ ಧನ್ವಂತರಿ ಸಭಾಭವನದಲ್ಲಿ ಸೋಮವಾರ ನಡೆದ ಆಳ್ವಾಸ್ ಫಾರ್ಮಸಿ ಕಾಲೇಜು ಉದ್ಘಾಟನೆ ಮತ್ತು ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಔಷಧಾಲಯ ಪರಿಣಿತರು ವೈದ್ಯರು ಸೂಚಿಸಿ ಬರೆದ ಔಷಧಗಳ ಸಂಪೂರ್ಣ ಜ್ಞಾನ ಹೊಂದಿರಬೇಕು. ಔಷಧಾಲಯ ಪರಿಣತರಿಗೆ ಜಗತ್ತಿನಾದ್ಯಂತ ಬೇಡಿಕೆ ಹೆಚ್ಚಿದೆ. ಆಳ್ವಾಸ್‌ನಲ್ಲಿ ‘ಫಾರ್ಮಸಿ’ ಎಲ್ಲ ಅಗತ್ಯ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು, ಅತ್ಯುನ್ನತ ಹುದ್ದೆಗಳಿಗೆ ತೆರಳಬೇಕು ಎಂದರು.
ಭಾರತವು ಜಗತ್ತಿನ ಔಷಧ ಶಾಲೆ. ಕೋವಿಡ್‌ನಂತಹ ಸಂದರ್ಭದಲ್ಲಿ ವಿವಿಧ ದೇಶಗಳ ಔಷಧಗಳ ಬೇಡಿಕೆ ಪೂರೈಸಿದೆ ಎಂದರು. ಮೂಡುಬಿದಿರೆ ಸಿ.ಎಚ್ ಮೆಡಿಕಲ್ ಮಾಲಕ ಸಿ.ಎಚ್. ಅಬ್ದುಲ್ ಗಫೂರ್ ಮಾತನಾಡಿ, ಆಳ್ವಾಸ್ ಕಾಲೇಜು ಧನಾತ್ಮಕ ಯೋಚನೆಗಳಿಗೆ ಸಹಕಾರಿಯಾಗಿದೆ ಎಂದರು.
ಫಾರ್ಮಸಿಯ ವಿಷಯಗಳು ಕಲಿಕೆಗೆ ಕಷ್ಟವಾಗಿದ್ದರೂ, ಪ್ರೀತಿಯಿಂದ ಕಲಿತರೆ ಸರಳ ಎನಿಸುತ್ತವೆ ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ರೋಗಿಗಳಿಗೆ ಔಷಧಿಗಳ ಜೊತೆಗೆ ಧೈರ್ಯವನ್ನು, ಸಲಹೆಗಳನ್ನು ನೀಡುವುದು ಮತ್ತು ಅವರಲ್ಲಿನ ಗೊಂದಲಗಳನ್ನು ನಿವಾರಿಸುವುದು ಅಗತ್ಯ ಎಂದರು.
ಮಾಜಿ ಶಾಸಕ ಅಭಯಚಂದ್ರ ಜೈನ್ ಮಾತನಾಡಿ, ಡಾ.ಎಂ. ಮೋಹನ ಆಳ್ವ ಅವರು ಆಳ್ವಾಸ್ ಫಾರ್ಮಸಿಯನ್ನು ತಡವಾಗಿ ಆರಂಭಿಸಿದರು, ಆದರೆ ಇಂದು ಯುವಕರಿಗೆ ಉತ್ತಮ ಅವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ. ಅನ್ಯ ವಿಷಯಗಳ ವಿದ್ಯಾರ್ಥಿಗಳಿಗೆ ಹೋಲಿಸಿದರೆ ‘ಫಾರ್ಮಸಿ’ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹೆಚ್ಚಿದ್ದು, ಆಳ್ವಾಸ್ ಫಾರ್ಮಸಿ ಇದಕ್ಕೆ ಸಹಕಾರಿಯಾಗಲಿದೆ ಎಂದರು.
ಶಾಸಕ ಉಮಾನಾಥ ಕೋಟ್ಯಾನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಡಾ. ಹನ್ನಾ ಆಳ್ವ ಉಪಸ್ಥಿತರಿದ್ದರು. ಆಳ್ವಾಸ್ ಫಾರ್ಮಸಿ ಕಾಲೇಜಿನ ಡಾ.ಎಂ.ಮಂಜುನಾಥ್ ಶೆಟ್ಟಿ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.