ಮಂಗಳೂರು : ಪತ್ನಿಗೆ ಹಲ್ಲೆ ನಡೆಸಿ ವಿಷಪ್ರಾಶನ ಮಾಡಿ ಹತ್ಯೆಗೈದ ಪತಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಂಧ್ಯಾ ಎಸ್. ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಉಳ್ಳಾಲ ತಾಲೂಕು ಸೋಮೇಶ್ವರ ಗ್ರಾಮದ ಕುಂಪಲ ಚೇತನ ನಗರದ ಜೋಸೆಫ್ ಫ್ರಾನ್ಸಿಸ್ ರೆನ್ಸನ್ ಆಲಿಯಾಸ್ ರೆನ್ಸನ್(53) ಶಿಕ್ಷೆಗೊಳಗಾದ ಆರೋಪಿ. ಈತನ ಪತ್ನಿ ಶೈಮಾ ಕೊಲೆಯಾದವರು.
ಆರೋಪಿ ಜೋಸೆಫ್ ಫ್ರಾನ್ಸಿಸ್ ರೆನ್ಸನ್ ಕುಡಿತ, ಜೂಜು ಮತ್ತಿತರ ದುಶ್ಚಟವನ್ನು ಹೊಂದಿದ್ದ. 2022ರ ಮೇ 11ರಂದು ಮಧ್ಯಾಹ್ನ ಶೈಮಾ ಅವರು ಮನೆಯಲ್ಲಿದ್ದಾಗ ಪತಿಗೆ ಬುದ್ದಿಮಾತು ಹೇಳಿದ್ದರು. ಅದನ್ನು ಸಹಿಸದ ಜೋಸೆಫ್ ಫ್ರಾನ್ಸಿಸ್ ಪತ್ನಿ ಶೈಮಾ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಕೋಣೆಯೊಳಗೆ ದೂಡಿ ಚಿಲಕ ಹಾಕಿ ಹಲ್ಲೆ ನಡೆಸಿದ್ದ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶೈಮಾ ಅವರು ವಿಷ ಪದಾರ್ಥ ಸೇವಿಸಿದ್ದಾರೆ ಎಂದು ನಂಬಿಸಲು ಮನೆಯಲ್ಲಿ ತಿಗಣೆಗೆ ಸಿಂಪಡಿಸಲು ತಂದಿರಿಸಲಾಗಿದ್ದ ವಿಷಪದಾರ್ಥವನ್ನು ಬಾಯಿಗೆ ಸುರಿದಿದ್ದ. ಘಟನೆ ನಡೆಯುವಾಗ ಅವರ ಇಬ್ಬರು ಪುತ್ರರು ಮನೆಯ ಲ್ಲಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶೈಮಾ ಅವರನ್ನು ಮಕ್ಕಳು ರಿಕ್ಷಾದಲ್ಲಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶೈಮಾ ಅವರು ಅದೇ ದಿನ ರಾತ್ರಿ ಮೃತಪಟ್ಟಿದ್ದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆರೋಪಿಯ ವಿರುದ್ಧದ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಮಾ. 12ರಂದು ತೀರ್ಪು ನೀಡಿದ್ದಾರೆ. ಐಪಿಸಿ ಕಲಂ 498(ಎ) ಅಡಿಯ ಅಪರಾಧಕ್ಕಾಗಿ 3 ವರ್ಷ ಜೈಲು ಮತ್ತು 10,000 ರೂ. ದಂಡ, ಐಪಿಸಿ ಕಲಂ 302ರಡಿ ಜೀವಾವಧಿ ಜೈಲು ಮತ್ತು 15,000 ರೂ. ದಂಡ ಮತ್ತು ಐಪಿಸಿ ಕಲಂ 201ರಡಿ 3 ವರ್ಷಗಳ ಜೈಲು ಮತ್ತು 10,000 ರೂ. ದಂಡ ವಿಧಿಸಿದ್ದಾರೆ.
ಮಕ್ಕಳು ಸಾಕ್ಷಿ ಹೇಳಲಿಲ್ಲ; ವೈದ್ಯರ ಸಾಕ್ಷಿ ಶಿಕ್ಷೆ ಕೊಡಿಸಿತು! ಈ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿದಾರರಾಗಿದ್ದ ಶೈಮಾ ಅವರ ಇಬ್ಬರು ಪುತ್ರರು ಪೂರಕ ಸಾಕ್ಷಿ ನೀಡದೆ ಪ್ರತಿಕೂಲ ಸಾಕ್ಷಿ ನುಡಿದಿದ್ದರು. ಆದರೆ ವೈದ್ಯರು ನೀಡಿದ ಶವಪರೀಕ್ಷಾ ವರದಿ ಆರೋಪಿಗೆ ಶಿಕ್ಷೆ ವಿಧಿಸಲು ಕಾರಣವಾಯಿತು.
ಬಳಿಕ ಮೃತದೇಹದ ವೈದ್ಯಕೀಯ ಶವಪರೀಕ್ಷೆ ನಡೆಸಿದ್ದ ಜಸ್ಟಿಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವಿಧಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ವರ್ಷಾ ಎ. ಶೆಟ್ಟಿ ಅವರು ಶೈಮಾ ಅವರ ತಲೆಗೆ ಆದ ಗಂಭೀರ ಗಾಯದಿಂದ ಮೃತಪಟ್ಟಿರುವುದಾಗಿ ಶವ ಪರೀಕ್ಷಾ ವರದಿ ನೀಡಿದ ಮೇರೆಗೆ ಅದೇ ದಿನ ಕೊಲೆ ಪ್ರಕರಣ ದಾಖಲಾಗಿತ್ತು. ಆ ಬಳಿಕ ಅವರು ನ್ಯಾಯಾಲಯದಲ್ಲಿ ಶವ ಪರೀಕ್ಷಾ ವರದಿಗೆ ಪೂರಕವಾಗಿ ಸಾಕ್ಷ್ಯ ನುಡಿದಿದ್ದರು. ಈ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿದಾರಾದ ಮಕ್ಕಳಾದ 16 ಮತ್ತು 18 ವರ್ಷ ವಯಸ್ಸಿನ ಮಕ್ಕಳು ಅಭಿಯೋಜನೆಗೆ ಪೂರಕವಾಗಿ ಸಾಕ್ಷಿ ನುಡಿಯದೆ ಘಟನೆ ದಿನ ತಾಯಿ ಕೋಣೆಗೆ ಹೋಗಿ ಚಿಲಕ ಹಾಕಿ ವಿಷ ಕುಡಿದು ಮೃತಪಟ್ಟಿರುತ್ತಾರೆಂದು ಸಾಕ್ಷಿ ನುಡಿದಿದ್ದರು.