ಕಾರ್ಕಳ : ಕುದುರೆಮುಖ ವನ್ಯಜೀವಿ ವಲಯದ ಮೂರ್ಲಿಕರಪ್ಪ ಬಳಿಯ ನೂರಾಲ್‌ಬೆಟ್ಟು ಗ್ರಾಮದಲ್ಲಿ ಬೇಟೆಯಾಡಲು ಯತ್ನಿಸಿದ ಇಬ್ಬರನ್ನು ಕಾರ್ಕಳ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತರನ್ನು ಸ್ಥಳೀಯ ನಿವಾಸಿಗಳಾದ ಪ್ರಶಾಂತ್ ಪೂಜಾರಿ ಮತ್ತು ಅಶೋಕ್ ಪೂಜಾರಿ ಎಂದು ಗುರುತಿಸಲಾಗಿದೆ. ಅಧಿಕಾರಿಗಳು ಬಂದೂಕು, 21 ಗುಂಡುಗಳು, ಸರ್ಚ್‌ಲೈಟ್, ಎರಡು ಮೊಬೈಲ್ ಫೋನ್‌ಗಳು, ಆರೋಪಿಗಳು ಬಳಸಿದ ಕಾರು ಮತ್ತು ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಧನದ ನಂತರ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕಾರ್ಯಾಚರಣೆಯನ್ನು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮು ಬಾಬು ಅವರ ನಿರ್ದೇಶನದ ಮೇರೆಗೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಎನ್ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ವನ್ಯಜೀವಿ ವಲಯ ಅರಣ್ಯಾಧಿಕಾರಿ ಶಶಿಧರ ಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ರಾಜು ಎಲ್ ಜೆ, ಅಧಿಕಾರಿಗಳಾದ ಅಭಿಲಾಷ್ ಎಸ್ ಬಿ, ಗಸ್ತು ಅರಣ್ಯ ರಕ್ಷಕರಾದ ಫಕೀರಪ್ಪ ಮತ್ತು ಮಲ್ಲಯ್ಯ, ಕಳ್ಳಭೇಟೆ ನಿಗ್ರಹ ರಕ್ಷಕರಾದ ಹರೀಶ್ ಎಂ, ನಿತಿನ್ ಮತ್ತು ಅಜಿತ್, ಚಾಲಕರಾದ ದಾಮೋದರ್ ಮತ್ತು ನಿತಿನ್ ಜೆ ಹೆಗಡೆ ಸೇರಿದಂತೆ ಇತರರು ಭಾಗವಹಿಸಿದ್ದರು.