ಮಂಗಳೂರು : ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ನಗರದ ಕ್ಲಾಕ್ ಟವರ್ ಬಳಿ ನಡೆದ ಪ್ರತಿಭಟನೆಯಲ್ಲಿ ಕೆಲ ಹಿಂದೂ ಕಾರ್ಯಕರ್ತರು ಪತ್ರಕರ್ತರ ಮೇಲೆಯೇ ಗೂಂಡಾಗಿರಿ ವರ್ತನೆ ತೋರಿದ ಘಟನೆ ಬುಧವಾರ ನಡೆದಿದೆ.
ಸಾವಿರಾರು ಮಂದಿ ಕಾರ್ಯಕರ್ತರು ಜಮಾಯಿಸಿ ಈ ಪ್ರತಿಭಟನೆ ನಡೆಯುತ್ತಿತ್ತು. ಆದರೆ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಪ್ರತಿಭಟನೆ ನಡೆಸಲು ಪೊಲೀಸರು ಕಾರ್ಯಕರ್ತರನ್ನು ರಸ್ತೆಯಿಂದ ಬದಿಗೆ ಸರಿಯುವಂತೆ ಒತ್ತಾಯಿಸುತ್ತಿದ್ದರು. ಈ ವೇಳೆ ಕೆಲವು ಕಾರ್ಯಕರ್ತರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಪೊಲೀಸರು, ಎಂಎಲ್ಎ ವೇದವ್ಯಾಸ ಕಾಮತ್, ಬಜರಂಗದಳ ಮುಖಂಡ ಪುನೀತ್ ಅತ್ತಾವರ ಕಾರ್ಯಕರ್ತರನ್ನು ಸಮಾಧಾನ ಮಾಡಲು ಯತ್ನಿಸಿದರೂ ಯಾರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಒಂದು ಹಂತಕ್ಕೆ ಪೊಲೀಸರು ವಾಹನಗಳನ್ನು ಕ್ಲಾಕ್ ಟವರ್ ಕಡೆಯಿಂದ ಸ್ಟೇಟ್‌ಬ್ಯಾಂಕ್ ಕಡೆಗೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಕೆಲ ಕ್ಷಣದಲ್ಲೇ ಕೆಲವು ಕಾರ್ಯಕರ್ತರು ಅರ್ಧಗಂಟೆ ವಾಹನಗಳನ್ನು ಪರ್ಯಾಯ ವ್ಯವಸ್ಥೆ ಮಾಡಲು ಸಾಧ್ಯವಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ರಸ್ತೆ ತಡೆ ನಡೆಸಿದ್ದಾರೆ.
ಈ ಎಲ್ಲಾ ದೃಶ್ಯಗಳನ್ನು ಪತ್ರಕರ್ತರು ತಮ್ಮ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕೆಲವು ಹಿಂದೂ ಕಾರ್ಯಕರ್ತರು ಪತ್ರಕರ್ತರನ್ನೇ ದಬಾಯಿಸಿ “ಇಲ್ಲಿ ಬಂದು ಯಾಕೆ ವೀಡಿಯೋ ಚಿತ್ರೀಕರಣ ಮಾಡುತ್ತೀರಿ?. ವೇದಿಕೆಯ ಚಿತ್ರೀಕರಣ ಮಾಡಿ” ಎಂದು ಒಂದಿಬ್ಬರು ಪತ್ರಕರ್ತರ ಮೇಲೆಯೇ ಗೂಂಡಾಗಿರಿ ವರ್ತನೆ ತೋರಿದ್ದಾರೆ. ಇದರಿಂದ ಕುಪಿತಗೊಂಡ ಪತ್ರಕರ್ತರು ಪ್ರತಿಭಟನೆಯನ್ನು ಬಾಯ್ಕಾಟ್ ಮಾಡಿ ಅಲ್ಲಿಂದ ಮರಳಿದ್ದಾರೆ.