ಮಂಗಳೂರು : ಶಿಥಿಲಾವಸ್ಥೆಗೆ ತಲುಪಿರುವ ಹಿನ್ನಲೆಯಲ್ಲಿ ದ.ಕ. ಜಿಲ್ಲಾಧಿಕಾರಿಯವರ ಆದೇಶದಂತೆ ಅಡ್ಡೂರು ಬಳಿಯಿರುವ ಪೊಳಲಿ ಸೇತುವೆಯಲ್ಲಿ ಘನವಾಹನಗಳ ಸಂಚಾರ ನಿಷೇಧಿಸಲಾಗಿದೆ. ಆದ್ದರಿಂದ ಪ್ರಯಾಣಿಕರು, ನಾಗರಿಕರು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ ಪಾದಯಾತ್ರೆಯೇ ಗತಿ ಎಂಬಂತಾಗಿದೆ.
ಅರ್ಧ ಶತಮಾನದಷ್ಟು ಹಳೆಯದಾದ ಈ ಸೇತುವೆಯನ್ನು ಇತ್ತೀಚೆಗೆ ಪರಿಶೀಲಿಸಿರುವ ಜಿಲ್ಲಾಮಟ್ಟದ ತಜ್ಞರ ಸಮಿತಿ, ವಾಹನಗಳ ಸಂಚಾರಕ್ಕೆ ಯೋಗ್ಯವಿಲ್ಲ ಎಂದು ವರದಿ ನೀಡಿತ್ತು. ಆದ್ದರಿಂದ ಇಲ್ಲಿ ಹೊಸಸೇತುವೆ ನಿರ್ಮಾಣದ ಅನಿವಾರ್ಯತೆ ಎದುರಾಗಿದೆ. ಸದ್ಯ ಪೊಳಲಿ ಸೇತುವೆಯ ಎರಡೂ ಬದಿಗಳಲ್ಲಿ 2.75 ಎತ್ತರಕ್ಕೆ ಕಮಾನು ಅಳವಡಿಸಲಾಗಿದೆ. ಇದರಿಂದ ಲಘುವಾಹನಗಳು ಮಾತ್ರ ಸೇತುವೆ ಮೇಲಿನಿಂದ ಸಂಚರಿಸಬಹುದೇ ಹೊರತು, ಘನ ವಾಹನಗಳಿಗೆ ಸಂಚರಿಸಲು ಸಾಧ್ಯವಿಲ್ಲ.
ಇದರಿಂದ ಪೊಳಲಿ ದ್ವಾರದ ಮೂಲಕ ಬರುವ ಬಸ್‌ಗಳು ಅಡ್ಡೂರಿನಲ್ಲಿ ಸೇತುವೆಯ ಆಚೆಯೇ ನಿಂತು ಪ್ರಯಾಣಿಕರನ್ನು ಇಳಿಸಿ ಅಲ್ಲಿಂದಲೇ ಮರಳುತ್ತದೆ. ಅಲ್ಲಿಂದ ಮುಂದಕ್ಕೆ ಪೊಳಲಿಯತ್ತ ಸಾಗುವ ಪ್ರಯಾಣಿಕರು ಸೇತುವೆ ಮೇಲಿನಿಂದ ನಡೆದೇ ಹೋಗಬೇಕಾಗಿದೆ. ಬಿ.ಸಿ.ರೋಡ್‌ನತ್ತ ಸಾಗುವವರು ಸೇತುವೆ ದಾಟಿದ ಬಳಿಕ ಮತ್ತೊಂದು ಬಸ್ ಏರಬೇಕಾದ ತೊಂದರೆಯಿದೆ. ಇದರಿಂದ ಈ ಭಾಗದ ಬಸ್ ಪ್ರಯಾಣಿಕರು ನಡೆದೇ ಸಂಚರಿಸಬೇಕಾದ ತೊಂದರೆ ಅನುಭವಿಸುತ್ತಿದ್ದಾರೆ. ಬಸ್‌ಗಳಲ್ಲಿ ಎರಡು ಬಾರಿ ಟಿಕೆಟ್ ಪಡೆದು ಸಂಚರಿಸುವ ಸಂಕಷ್ಟವೂ ಇಲ್ಲಿನವರಿಗೆ ಎದುರಾಗಿದೆ. ಯಾವಾಗ ಸೇತುವೆ ದುರಸ್ತಿಗೊಳ್ಳಲಿದೆ ಅಥವಾ ಹೊಸ ಸೇತುವೆ ನಿರ್ಮಾಣವಾಗಲಿದೆ. ಈ ಸಮಸ್ಯೆಗೆ ಪರಿಹಾರ ಯಾವಾಗ ಎಂಬುದೇ ಇಲ್ಲಿನವರಿಗೆ ಕಾಡುವ ಯಕ್ಷಪ್ರಶ್ನೆಯಾಗಿದೆ.