Thursday, February 20, 2025
Banner
Banner
Banner
Home » ಕುಂಭಮೇಳ ಅಧ್ಯಯನ ಪ್ರವಾಸಕ್ಕೆ ತನ್ನ ಶಾಸಕರಿಗೆ ಲಕ್ಷಾಂತರ ಹಣ ವ್ಯಯಿಸುವ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಗ್ರಾಮ ಆಡಳಿತಾಧಿಕಾರಿಗಳ ಜ್ವಲಂತ ಸಮಸ್ಯೆಗಳು ಕಾಣದಾಯಿತೇ : ರೇಷ್ಮಾ ಉದಯ ಶೆಟ್ಟಿ

ಕುಂಭಮೇಳ ಅಧ್ಯಯನ ಪ್ರವಾಸಕ್ಕೆ ತನ್ನ ಶಾಸಕರಿಗೆ ಲಕ್ಷಾಂತರ ಹಣ ವ್ಯಯಿಸುವ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಗ್ರಾಮ ಆಡಳಿತಾಧಿಕಾರಿಗಳ ಜ್ವಲಂತ ಸಮಸ್ಯೆಗಳು ಕಾಣದಾಯಿತೇ : ರೇಷ್ಮಾ ಉದಯ ಶೆಟ್ಟಿ

by NewsDesk

ಉಡುಪಿ : ‘ಗಂಗೆಯಲ್ಲಿ ಮಿಂದರೆ ಬಡತನ ನೀಗುತ್ತದೆಯೇ’ ಎಂದು ಪ್ರಶ್ನಿಸಿ ಕೋಟ್ಯಾಂತರ ಆಸ್ತಿಕ ಹಿಂದೂಗಳ ಭಾವನೆಗಳಿಗೆ ಘಾಸಿಯಂನ್ನುಟುಮಾಡಿದ್ದ ಎಐಸಿಸಿ ಅಧ್ಯಕ್ಷ ಖರ್ಗೆ ಉವಾಚದ ನಡುವೆಯೇ ಸದನದ ವಸತಿ ಸಮಿತಿ ಸದಸ್ಯರಿಗೆ, ಅದರಲ್ಲೂ ಗರಿಷ್ಠ ಸಂಖ್ಯೆಯ ಕಾಂಗ್ರೆಸ್ ಶಾಸಕರಿಗೆ ಕುಂಭಮೇಳ (ಉತ್ತರ ಭಾರತ) ಅಧ್ಯಯನ ಪ್ರವಾಸಕ್ಕೆ ರೂ.50 ಲಕ್ಷಕ್ಕೂ ಮಿಕ್ಕಿದ ಮೊತ್ತವನ್ನು ವ್ಯಯಿಸಲು ಮುಂದಾಗಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರಕ್ಕೆ ಕಳೆದ ಒಂದು ವಾರದಿಂದ ವಿವಿಧ ತುರ್ತು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯoತ ಪ್ರತೀ ತಾಲೂಕು ಕೇಂದ್ರಗಳಲ್ಲಿ ನಡೆಯುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ ಕಾಣದಾಯಿತೇ ಎಂದು ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಹಾಗೂ ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಪ್ರಶ್ನಿಸಿದ್ದಾರೆ.

ಗ್ರಾಮ ಆಡಳಿತಾಧಿಕಾರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿದ್ದು ಕಛೇರಿಯಲ್ಲಿ ಶೌಚಾಲಯದಂತಹ ಕನಿಷ್ಠ ಮುಲಭೂತ ವ್ಯವಸ್ಥೆಗಳನ್ನೂ ಒದಗಿಸಲು ಅಸಮರ್ಥವಾಗಿರುವ ರಾಜ್ಯ ಸರಕಾರ ಕಾಂಗ್ರೆಸ್ ಶಾಸಕರ ಓಲೈಕೆಗಾಗಿ 42 ಮಂದಿ ಶಾಸಕರನ್ನು ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನವನ್ನು ನೀಡಿ ಅವರು ಸರಕಾರಕ್ಕೆ ನಿಷ್ಠರಾಗಿರುವಂತೆ ನೋಡಿಕೊಂಡಿರುವುದು ಹಾಗೂ ಸರಕಾರದ ಈ ನಡೆಯ ವಿರುದ್ಧ ಸಾರ್ವಜನಿಕ ಹಿತಾಸಕ್ತಿಯ ದೂರು ದಾಖಲಾಗಿರುವುದು ಮಾತ್ರವಲ್ಲದೆ ವಿವಿಧ ಸಮಾವೇಶಗಳಿಗೆ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಹೆಚ್ಚಿನ ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿಗಳು ಸ್ವಂತ ಕಟ್ಟಡವೂ ಇಲ್ಲದೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಹುಟ್ಟಿನಿಂದ ಸಾವಿನವರೆಗೆ, ಸರಕಾರದ ಎಲ್ಲಾ ಯೋಜನೆಗಳನ್ನು ಜನತೆಗೆ ತಲುಪಿಸುವ ಮಹತ್ತರ ಜವಾಬ್ದಾರಿಗಳನ್ನು ಹೊಂದಿರುವ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸರಕಾರ ಇಂದಿನ ತಾಂತ್ರಿಕ ಯುಗದ ಕಾಲ ಘಟ್ಟದಲ್ಲೂ ಸೂಕ್ತ ಮೊಬೈಲ್ ವ್ಯವಸ್ಥೆಯನ್ನೂ ಮಾಡದಿರುವುದು ಶೋಚನೀಯವಾಗಿದೆ.

ಸಮಸ್ಯೆಗಳ ಆಗರವಾಗಿ ನಲುಗಿರುವ ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿಯಲ್ಲಿ ದೈನಂದಿನ ಕೆಲಸ ಕಾರ್ಯಗಳು ಓಬಿರಾಯನ ಕಾಲದ ಮಾದರಿಯಲ್ಲೇ ಸಾಗುತ್ತಿರುವುದು ವಿಪರ್ಯಾಸ. ದೈನಂದಿನ ಪ್ರಮುಖ ದಾಖಲೀಕರಣ ಕೇಂದ್ರವಾಗಿರುವ ಈ ಕಛೇರಿಯಲ್ಲಿ ಅಗತ್ಯವೆನಿಸಿರುವ ಕಂಪ್ಯೂಟರ್, ಪ್ರಿಂಟರ್ ಹಾಗೂ ಇಂಟರ್ನೆಟ್ ಸಂಪರ್ಕವೇ ಇಲ್ಲದಿರುವುದು ಆಶ್ಚರ್ಯಕರ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವೃದ್ದಾಪ್ಯ ವೇತನ, ವಿಧವಾ ಮಾಸಾಶನ, ವಿಕಲಚೇತನ ಮಾಸಾಶನ, ರಾಷ್ಟ್ರೀಯ ಕುಟುಂಬ ಸಹಾಯಧನ, ಭಾಷಾ ಪ್ರಮಾಣ ಪತ್ರ, ರೈತರ ಪ್ರಮಾಣ ಪತ್ರ, ಕೃಷಿ ಕೂಲಿ ಕಾರ್ಮಿಕ ಪ್ರಮಾಣ ಪತ್ರ, ಕೃಷಿ ಬೆಳೆಹಾನಿ ವರದಿ, ಪ್ರಾಕೃತಿಕ ವಿಕೋಪ ವರದಿ, ಭೂಪರಿವರ್ತನಾ ವರದಿ, ಬೆಳೆ ಸಮೀಕ್ಷೆ, ಬೆಳೆ ಕಟಾವು, ಸರಕಾರಿ ಜಮೀನು ಸಂರಕ್ಷಣೆ ಮತ್ತು ಅತಿಕ್ರಮಣ ತಡೆ, ಕೆರೆ ಒತ್ತುವರಿ ತಡೆ ಸಹಿತ ಹಲವಾರು ಪ್ರಮುಖ ಕೆಲಸಕಾರ್ಯಗಳ ರೂವಾರಿಗಳಾಗಿರುವ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳಿಗೆ ಸರಕಾರ ತಕ್ಷಣ ಸ್ಪಂದಿಸಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಆದ್ಯತೆ ಮೇರೆಗೆ ಒದಗಿಸುವ ಮೂಲಕ ಗ್ರಾಮಾಭಿವೃದ್ಧಿಯೊಂದಿಗೆ ಮಹಾತ್ಮ ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಿಸುವ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದು ಇಂದಿನ ಅಗತ್ಯತೆಯಾಗಿದೆ. ರಾಜ್ಯಾದ್ಯಂತ ತಾಲೂಕು ಕಛೇರಿಗಳ ಮುಂಭಾಗದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಧರಣಿ ನಿರತ ಗ್ರಾಮ ಅಧಿಕಾರಿಗಳ ಮನವಿಯನ್ನು ಪುರಸ್ಕರಿಸಿ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರಕಾರ ಗಮನ ಹರಿಸಬೇಕು ಎಂದು ರೇಷ್ಮಾ ಉದಯ ಶೆಟ್ಟಿ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

You may also like

Leave a Comment

Maax-Media-Logo

Maax News covers major news and events of Udupi district. This channel provides detailed reports on the political, social, economic, and cultural life of Udupi district.

Maax News, equipped with the most sophisticated studio in Udupi, assures people comprehensive news coverage.

Copyrights © maaxmedia.in All Rights Reserved. Designed by Sabweb