ಉಡುಪಿ : ಕಳೆದು ಹೋಗಿದ್ದ 18 ಮಂದಿಯ ಮೊಬೈಲ್‌ಗಳನ್ನು ಪತ್ತೆ ಮಾಡಿರುವ ನಗರ ಪೊಲೀಸರು, ಸೋಮವಾರ ಆ ಮೊಬೈಲ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು.
ಸಾರ್ವಜನಿಕರು ತಾವು ಕಳೆದುಕೊಂಡಿದ್ದ ಮೊಬೈಲ್‌ಗಳ ಪತ್ತೆಗಾಗಿ ಸೆಂಟ್ರಲ್ ಇಕ್ವಿಪ್‌ಮೆಂಟ್ ರಿಜಿಸ್ಟರ್ (ಸಿಇಐಆರ್) ಮತ್ತು ಕೆಎಸ್‌ಪಿ ಇ-ಲಾಸ್ಟ್‌ನಲ್ಲಿ ದೂರು ದಾಖಲಿಸಿದ್ದರು.
ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಕೊಂಡಿದ್ದ ಒಟ್ಟು 3,53,400 ರೂ. ಮೌಲ್ಯದ ಒಟ್ಟು 18 ಮೊಬೈಲ್‌ಗಳನ್ನು ಪತ್ತೆ ಮಾಡಲಾಗಿದ್ದು, ಉಡುಪಿ ಡಿವೈಎಸ್ಪಿ ಪ್ರಭು ಡಿಟಿ ಅವರು ವಾರಸುದಾರರಿಗೆ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಅವರು, ಮೊಬೈಲ್ ಕಳೆದುಕೊಂಡವರು ಸಿಇಐಆರ್ ಪೋರ್ಟಲ್ ಮೂಲಕ ದೂರು ದಾಖಲಿಸಿದ್ದು, ಅದರ ಮಾಹಿತಿ ಸ್ಥಳೀಯ ಪೊಲೀಸ್ ಠಾಣೆಗೆ ಲಭ್ಯವಾಗುತ್ತದೆ. ಅವರ ದೂರಿನ ಅನ್ವಯ ಪೊಲೀಸರು ಮೊಬೈಲ್‌ಗಳನ್ನು ಪತ್ತೆ ಹಚ್ಚಿದ್ದಾರೆ ಎಂದರು.
ಮೊಬೈಲ್ ಫೋನ್ ಕಳೆದುಕೊಂಡವರಿಗೆ ಅವುಗಳನ್ನು ಹುಡುಕಿ ವಾಪಸ್ ಕೊಡುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಕಳೆದುಕೊಂಡ ಫೋನ್ ಸಿಗೋದೇ ಇಲ್ಲ ಎಂದು ಬೇಸರಗೊಂಡಿದ್ದ ವಾರಸುದಾರರು ಮರಳಿ ಮೊಬೈಲ್ ಪಡೆದದ್ದಕ್ಕೆ ಸಂತಸಪಟ್ಟರು.