ಮಂಗಳೂರು : ನಗರದ ಕಂಕನಾಡಿಯ ಮಾರುಕಟ್ಟೆ ಬಳಿ ನಿಲ್ಲಿಸಿದ್ದ ಹುಂಡೈ ಕ್ರೆಟಾ ಕಾರಿನ ಗಾಜು ಒಡೆದು ಲ್ಯಾಪ್‌ಟಾಪ್, ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಆರೋಪಿಯನ್ನು ಕದ್ರಿ ಪೋಲೀಸರು ಪ್ರಕರಣ ನಡೆದ 24ಗಂಟೆಗಳೊಳಗೆ ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಡ್ಯಾರ್ ನಿವಾಸಿ ಅಬ್ದುಲ್ ಅಕ್ರಮ್(33) ಬಂಧಿತ ಆರೋಪಿ.
ಕೆಲಸದ ನಿಮಿತ್ತ ಮುಂಬೈಗೆ ತೆರಳಿದ್ದ ಪತಿಯನ್ನು ಕರೆತರಲು ವಿಮಾನ ನಿಲ್ದಾಣಕ್ಕೆ ಮಹಿಳೆಯೊಬ್ಬರು ರವಿವಾರ ರಾತ್ರಿ ತೆರಳಿದ್ದರು. ಆದರೆ ಪತಿ ಮರಳುವ ವಿಮಾನವು ತಡವಾಗಿದ್ದರಿಂದ ಕಂಕನಾಡಿಯ ಹಾಲಿವುಡ್ ಲಾಂಜ್ ರೆಸ್ಟೋರೆಂಟ್‌ಗೆ ಕಾರು ನಿಲ್ಲಿಸಿ ಊಟಕ್ಕೆ ತೆರಳಿದ್ದರು. ಆದರೆ ಊಟ ಮುಗಿಸಿ ಹೊರಬಂದಾಗ ಕಂಕನಾಡಿಯ ಮಾರುಕಟ್ಟೆ ಬಳಿ ನಿಲ್ಲಿಸಿದ್ದ ಕಾರಿನ ಎಡಗಡೆಯ ಗಾಜನ್ನು ಒಡೆದು, ಡ್ಯಾಶ್‌ಬೋರ್ಡ್‌ನಲ್ಲಿದ್ದ ಲ್ಯಾಪ್ ಟಾಪ್ ಹಾಗೂ ವ್ಯಾನಿಟಿ ಬ್ಯಾಗ್ ಅನ್ನು ಯಾರೋ ಕಳವು ಮಾಡಿದ್ದು ಅವರ ಗಮನಕ್ಕೆ ಬಂದಿದೆ.
ಪರಿಶೀಲನೆ ನಡೆಸಿದಾಗ ವ್ಯಾನಿಟಿ ಬ್ಯಾಗ್‌ನಲ್ಲಿ ವಜ್ರದ ಕರಿಮಣಿ ಸರ, ವಜ್ರದ ಎರಡು ಉಂಗುರಗಳು, ವಜ್ರದ ಕಿವಿಯೋಲೆಗಳು, ಲ್ಯಾಪ್‌ಟಾಪ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಡೆಬಿಟ್ ಕಾರ್ಡ್, ಕಾರಿನ ನೋಂದಣಿ ಪ್ರಮಾಣಪತ್ರ, ಪತಿಯ ಚಾಲನಾ ಪ್ರಮಾಣಪತ್ರ ಕಳುವಾಗಿತ್ತು. ಲ್ಯಾಪ್‌ಟಾಪ್ ಹಾಗೂ ಚಿನ್ನಾಭರಣ ಸೇರಿದಂತೆ ಒಟ್ಟು 7.30ಲಕ್ಷ ರೂ. ಮೊತ್ತದ ಸೊತ್ತು ಕಳವಾಗಿದೆ ಎಂದು ಮಹಿಳೆ ಕದ್ರಿ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಸೊತ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ.