ಉಡುಪಿ : ಬೃಹತ್ ಗೀತೋತ್ಸವದ ಮಂಗಳೋತ್ಸವು ಕೃಷ್ಣಮಠದ ರಾಜಾಗಣದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಸಂಪನ್ನಗೊಂಡಿತು.
ಗೀತಾ ಜ್ಞಾನ ದೀಪೋತ್ಸವದ ಜತೆಗೆ ಶ್ರೀಪಾದರು ಶ್ರೀ ಕೃಷ್ಣನಿಗೆ ಸಮರ್ಪಿಸಿದ ಪಾರ್ಥಸಾರಥಿ ಸುವರ್ಣ ರಥದ ಮಾದರಿಯ ಗೀತಾ ರಥವನ್ನು ರಾಜಾಂಗಣದ ಪರಿಸರದಲ್ಲಿ ಎಳೆಯುವ ಮೂಲಕ ವಿಶಿಷ್ಟವಾಗಿ ಮಂಗಳೋತ್ಸವ ಆಚರಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ದಿನೇಶ್, ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್, ನಟ ಉಪೇಂದ್ರ, ಶಾಸಕರಾದ ಯಶ್‌ಪಾಲ್ ಎ. ಸುವರ್ಣ, ಉದ್ಯಮಿಗಳಾದ ಮನೋಹರ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ ಸೇರಿ ಗಣ್ಯರು ಪಾಲ್ಗೊಂಡಿದ್ದರು.
ಪುತ್ತಿಗೆ ಶ್ರೀಪಾದರು 2025ರ ವಿಶ್ವಾವಸು ನಾಮ ಸಂವತ್ಸರದ ಶ್ರೀ ಪುತ್ತಿಗೆ ಮಠ ಪರ್ಯಾಯ ಪಂಚಾಂಗ ಬಿಡುಗಡೆ ಮಾಡಿದರು. ಬಳಿಕ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.