ಉಡುಪಿ : ಕಳೆದ ಹಲವು ದಿನಗಳಿಂದ ಅನಿರ್ದಿಷ್ಟಾವಧಿಗೆ ತಮ್ಮ ನ್ಯಾಯಯುತ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಗ್ರಾಮ ಲೆಕ್ಕಾಧಿಕಾರಿಗಳ ಬೇಡಿಕೆಯನ್ನು ರಾಜ್ಯ ಸರ್ಕಾರ ಆದ್ಯತೆಯ ಮೇರೆಗೆ ಈಡೇರಿಸುವಂತೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ಉಡುಪಿ ಹಾಗೂ ಬ್ರಹ್ಮಾವರ ತಾಲೂಕು ಕಚೇರಿ ಮುಂಭಾಗದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಅವರ ಅಹವಾಲು ಆಲಿಸಿದರು.
ಗ್ರಾಮ ಆಡಳಿತಾಧಿಕಾರಿಗಳ ಕಾರ್ಯ ನಿರ್ವಹಣೆಗೆ ಪೂರಕ ಕಚೇರಿ, ಇಲಾಖಾ ಸಂಬಂಧಿತ ಕಾರ್ಯಗಳಿಗೆ ಉತ್ತಮ ಗುಣಮಟ್ಟದ ಮೊಬೈಲ್, ಅಂತರ್ ಜಿಲ್ಲಾ ವರ್ಗಾವಣೆ ಮರುಸ್ಥಾಪನೆ, ವೇತನ ಶ್ರೇಣಿ ನಿಗದಿ, ಅನುಕಂಪದ ನೇಮಕಾತಿ ಹುದ್ದೆ, ಒಂದು ತಿಂಗಳ ಹೆಚ್ಚುವರಿ ವೇತನ, ಪ್ರಯಾಣ ಭತ್ಯೆ ದರ ಏರಿಕೆ, ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ಜೀವ ಹಾನಿಯಾದ ಸಂದರ್ಭದಲ್ಲಿ 50 ಲಕ್ಷಗಳ ಪರಿಹಾರ ಮಂಜೂರು ಮೊದಲಾದ ಬೇಡಿಕೆಗಳನ್ನು ಸರಕಾರ ಆದ್ಯತೆಯ ಮೇಲೆ ಈಡೇರಿಸಿ, ಸರ್ಕಾರದ ಕಾರ್ಯ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಗ್ರಾಮ ಆಡಳಿತಾಧಿಕಾರಿಗಳಿಗೆ ಸೇವಾ ಭದ್ರತೆ ಒದಗಿಸಬೇಕಿದೆ.
ಗ್ರಾಮ ಆಡಳಿತಾಧಿಕಾರಿಗಳ ಪ್ರತಿಭಟನೆಯಿಂದ ಕಂದಾಯ ಇಲಾಖೆಯ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿದ್ದು ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದ್ದು ರಾಜ್ಯ ಸರ್ಕಾರ ತಕ್ಷಣ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ರಾಜೀವ್ ಕುಲಾಲ್ ಹಾಗೂ ಗ್ರಾಮ ಆಡಳಿತಾಧಿಕಾರಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.