ಮಲ್ಪೆ : ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಮೀನು ಹೊರುವ ಮಹಿಳೆಗೆ ಹೊಡೆದ ಘಟನೆ ಉದ್ದೇಶ ಪೂರ್ವಕವಾಗಿರದೆ ಕ್ಷಣಿಕ ಸಿಟ್ಟಿನಿಂದ ಘಟಿಸಿದ್ದು ಎಂದು ಮಲ್ಪೆ ಮೀನುಗಾರರ ಸಂಘ ಸ್ಪಷ್ಟಪಡಿಸಿದೆ.
ನಾವು ಈ ಘಟನೆಯನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಎಂದಿರುವ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಪ್ರತಿ ದಿನ ಸಾವಿರಾರು ಕುಟುಂಬಗಳು ಜಾತಿ, ಮತ, ಪಂಗಡ, ಭೇದವಿಲ್ಲದೆ ಹೊರರಾಜ್ಯ, ಜಿಲ್ಲೆಯ ಜನರು ಮೀನುಗಾರಿಕೆಯಲ್ಲಿ ದುಡಿದು ಜೀವನ ಸಾಗಿಸುತ್ತಿವೆ. ಆದರೆ ಸ್ಥಳೀಯ ನಮ್ಮ ಮೀನುಗಾರರ ಸಂಘಟನೆಗಳು ಸೌಹಾರ್ದಯುತವಾಗಿ ನ್ಯಾಯ ಕೊಡುವಲ್ಲಿ ಬದ್ಧ ಎಂದು ತಿಳಿಸಿದ್ದಾರೆ.
ಘಟನೆ ಗಮನಕ್ಕೆ ಬಂದ ಕೂಡಲೇ ಮಲ್ಪೆಯ ಠಾಣಾಧಿಕಾರಿಯ ಗಮನಕ್ಕೆ ತಂದು ಎರಡೂ ಕಡೆಯವರನ್ನು ಮೀನುಗಾರ ಮುಖಂಡರ ಸಮಕ್ಷಮದಲ್ಲಿ ವಿಚಾರಿಸಲಾಗಿದ್ದು ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾರೆ. ಈ ಬಗ್ಗೆ ಠಾಣಾಧಿಕಾರಿಯವರು 2 ಕಡೆಯವರಿಂದ ತಪ್ರೊಪ್ಪಿಗೆ ಹಿಂಬರಹವನ್ನು ಬರೆಸಿಕೊಂಡು ಇತ್ಯರ್ಥಗೊಳಿಸಿದ್ದರು ಎಂದಿದ್ದಾರೆ.
ಮೀನುಗಾರರ ಮೇಲೆ ಕಳಂಕ ಬರುವಂತೆ ಬಿಂಬಿಸಿರುವ, ಘಟನೆಯ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವ ಬಗ್ಗೆ ಮಾರ್ಚ್ 22ರಂದು ಬೆಳಗ್ಗೆ 9 ಕ್ಕೆ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನುಗಾರರು ಸ್ವ ಇಚ್ಛೆಯಿಂದ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆಯನ್ನು ನಡೆಸುವರು. ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಘದವರು ಮನವಿ ಸಲ್ಲಿಸುವರು ಎಂದು ಸಂಘ ಪದಾಧಿಕಾರಿಗಳು ತಿಳಿಸಿದ್ದಾರೆ.