ಬೆಳ್ತಂಗಡಿ : ಮಹಿಳೆಯೊಬ್ಬರು ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂಬಾಲಿಸಿಕೊಂಡು ಬಂದು ಬೆದರಿಸಿ ಚಿನ್ನದ ಕರಿಮಣಿ ಸರವನ್ನು ಕಸಿದು ಪರಾರಿಯಾಗಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ, ಚಿನ್ನದ ಕರಿಮಣಿ ಸರವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಗಿರಿಗುಡ್ಡೆ, ಡೆಂಬುಗ ನಿವಾಸಿ ಉಮೇಶ್ ಗೌಡ(38) ಎಂಬಾತನನ್ನು ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದ ತಂಡದ ಸಿಬ್ಬಂದಿಗಳು ಕೊಯ್ಯೂರು ಗ್ರಾಮದ ಆದೂರ್ ಪೆರಲ್ ಬಸ್ ನಿಲ್ದಾಣದಲ್ಲಿ ಡಿ.10 ರಂದು ಬೆಳಗ್ಗೆ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ಬೆಳ್ತಂಗಡಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಕೋರಿಯಾರ್ ನಿವಾಸಿ ರಾಜೀವಿ(50) ಎಂಬವರು ಡಿ.9 ರಂದು ಮಧ್ಯಾಹ್ನ ಬೆಳ್ತಂಗಡಿಗೆ ಬಂದಿದ್ದವರು ವಾಪಸ್ ತನ್ನ ಮನೆಯಾದ ಕೊಯ್ಯೂರು ಗ್ರಾಮದ ಪಾಂಬೇಲ್ ಕ್ರಾಸ್ನಲ್ಲಿ ಇಳಿದು ಕೋರಿಯಾರ್ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಉಮೇಶ್ ಗೌಡ ಎಂಬಾತ ಹಿಂದಿನಿಂದ ಓಡಿ ಬಂದು ಮಹಿಳೆಯ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು ಬೊಬ್ಬೆ ಹಾಕಬೇಡಿ ಎಂದು ಬೆದರಿಸಿ ಕುತ್ತಿಗೆಯಲ್ಲಿದ್ದ 32 ಗ್ರಾಂ ಚಿನ್ನದ ಕರಿಮಣಿ ಸರವನ್ನು ಎಳೆದಿದ್ದು, ಈ ವೇಳೆ ಕೈಯಲ್ಲಿ ಗಟ್ಟಿಯಾಗಿ ಹಿಡಿದು ಬೊಬ್ಬೆ ಹಾಕಿದಾಗ ಕರಿಮಣಿ ಎಳೆದ ರಭಸಕ್ಕೆ ಕುತ್ತಿಗೆ ಎದೆಗೆ ಗಾಯವಾಗಿದ್ದು, ಕರಿಮಣಿ ಎರಡು ತುಂಡಾಗಿದ್ದು, ಒಂದು ತುಂಡು ಕರಿಮಣಿಯನ್ನು ಆರೋಪಿ ಉಮೇಶ್ ಗೌಡ ಸುಲಿಗೆ ಮಾಡಿಕೊಂಡು ಓಡಿ ಪರಾರಿಯಾಗಿದ್ದಾನೆ. ಗಾಯಗೊಂಡ ರಾಜೀವಿ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
ಸುಮಾರು ಒಂದು ಲಕ್ಷ ಮೌಲ್ಯದ 16 ಗ್ರಾಂ ಚಿನ್ನ ಸುಲಿಗೆ ಮಾಡಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.