ಮಂಗಳೂರು : ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಮೇಲೆ ಹೋಗಿ ನಿಂತ ಘಟನೆ ಮಂಗಳೂರು ನಗರದ ಪಡೀಲ್ ಬಳಿಯ ಅಳಪೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ನಡೆದಿದೆ.
ಪಡೀಲ್ ಕಡೆಯಿಂದ ನಂತೂರಿನ ಕಡೆಗೆ ಸಾಗುತ್ತಿದ್ದ ಕಾರು, ಅಳಪೆಯ ಕಡಿದಾದ ತಿರುವಿನಲ್ಲಿ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣಕ್ಕೆ ಸಿಗದ ಕಾರು, ನೇರವಾಗಿ ರಸ್ತೆಯ ವಿಭಜಕದ ಮೇಲೆ ಹೋಗಿ ಕುಳಿತಿದೆ. ಹೀಗಾಗಿ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿನಲ್ಲಿ ಕೇವಲ ಚಾಲಕ ಮಾತ್ರ ಇದ್ದು, ನಂತೂರು ಮಾರ್ಗವಾಗಿ ಮಂಗಳೂರು ನಗರಕ್ಕೆ ಆಗಮಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಘಟನೆಯಿಂದಾಗಿ ಕಾರಿನ ಮುಂಭಾಗದ ಚಕ್ರಕ್ಕೆ ಹಾನಿಯುಂಟಾಗಿತ್ತು. ಬಳಿಕ ಡಿವೈಡರ್‌ನಲ್ಲಿದ್ದ ಕಾರನ್ನು ಸಾರ್ವಜನಿಕರೇ ಸೇರಿಕೊಂಡು ಬದಿಗೆ ಸರಿಸುವ ಮೂಲಕ ಕಾರಿನ ಚಾಲಕನಿಗೆ ನೆರವು ನೀಡಿರುವುದಾಗಿ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ.