ಉಡುಪಿ : ತುರ್ತು ಸಂದರ್ಭದಲ್ಲಿ ತನ್ನ ಜೀವದ ಹಂಗುತೊರೆದು ನೂರಾರು ಜೀವಗಳನ್ನು ರಕ್ಷಿಸಿದ ಆಪಧ್ಬಾಂದವ, ಮುಳುಗುತಜ್ಞ ಈಶ್ವರ್ ಮಲ್ಪೆಯವರಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ರೂ.1 ಲಕ್ಷದ ಚೆಕ್‌ನ್ನು ಅರುಣ್ ಕುಮಾರ್ ಪುತ್ತಿಲ ಈಶ್ವರ್ ಮಲ್ಪೆ ಮತ್ತು ಗೀತಾ ದಂಪತಿಗಳಿಗೆ ಅವರ ಮಲ್ಪೆಯ ಮನೆಯಲ್ಲಿ ವಿತರಿಸಿದರು.
ತನ್ನ ಮಕ್ಕಳು ವಿಶೇಷ ಚೇತನರಾಗಿ ತೀವ್ರ ಅನಾರೋಗ್ಯದಿಂದಿದ್ದರೂ ಮನೆಯ ಪರಿಸ್ಥಿತಿಯನ್ನು ಲೆಕ್ಕಿಸದೆ ಪ್ರಾಕೃತಿಕ ವಿಕೋಪದ ಕಠಿಣ ಸಂದರ್ಭದಲ್ಲಿ ಜೀವದ ಹಂಗು ತೊರೆದು ಉಚಿತವಾಗಿ ರಕ್ಷಣೆಗೆ ಧಾವಿಸುವ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆಯವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಉತ್ತರ ಕನ್ನಡ ಜಿಲ್ಲೆಯ ಶೀರೂರು ಗುಡ್ಡ ಕುಸಿತದ ರಕ್ಷಣಾ ಕಾರ್ಯದಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತದ ಮನವಿಯ ಮೇರೆಗೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ನಾಪತ್ತೆಯಾಗಿದ್ದ ಚಾಲಕ ಅರ್ಜುನ್ ಲಾರಿಯನ್ನು ಗುರುತಿಸುವಲ್ಲಿಯೂ ಈಶ್ವರ್ ಮಲ್ಪೆ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಕೊನೆಗೆ ಅವರನ್ನು ಅಧಿಕಾರಿಗಳು ಮತ್ತು ಸರ್ಕಾರ ಕಡೆಗಣನೆ ಮಾಡಿರುವುದು ಸಮಾಜದಲ್ಲಿ ತೀವ್ರ ಬೇಸರವನ್ನು ಉಂಟುಮಾಡಿದೆ.
ಮನೆಯಲ್ಲಿ ಬಡತನವಿದ್ದರೂ ಮಾನವೀಯತೆಯಲ್ಲಿ ಆಗರ್ಭ ಶ್ರೀಮಂತರಾಗಿರುವ ಈಶ್ವರ್ ಮಲ್ಪೆಯವರ ಸೇವೆ ಇನ್ನಷ್ಟು ಬೇಕೆಂಬ ಹಂಬಲದಿಂದ ಪ್ರತಿಯೊಬ್ಬನೂ ಈಶ್ವರ್ ಮಲ್ಪೆಯವರಿಗೆ ಬೆಂಬಲವಾಗಿ ನಿಲ್ಲಬೇಕೆಂದು ಈ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ ಹೇಳಿದರು.