ಉಡುಪಿ : ದಲಿತರ ಮೀಸಲು ಹಣದಿಂದ ನಿರ್ಮಾಣಗೊಂಡಿರುವ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿರುವ ಬನ್ನಂಜೆ ಗಾಂಧಿಭವನವನ್ನು ಅನ್ಯರಿಗೆ ಹಸ್ತಾಂತರಿಸಿದರೆ ಹೋರಾಟ ನಡೆಸುತ್ತೇವೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯ ಜಯನ್ ಮಲ್ಪೆ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

90 ವರ್ಷದಿಂದ ಲಕ್ಷ್ಮೀನಾರಾಯಣ ಭಜನಾ ಮಂಡಳಿಯಾಗಿದ್ದ ಈ ಜಾಗದಲ್ಲಿ ಅಂದಿನ ಪುರಸಭೆಯ ಅಧ್ಯಕ್ಷರಾಗಿದ್ದ ದಿ.ಡಾ.ವಿ.ಎಸ್.ಆಚಾರ್ಯ ಮತ್ತು ರೊನಾಲ್ಡ್ ಪ್ರವೀಣಕುಮಾರ್ ಅವರು ದಲಿತರ ಸಭೆ-ಸಮಾರಂಭ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಮೀಸಲು ನಿಧಿಯಲ್ಲಿ 1985ರಲ್ಲಿ ಗಾಂಧಿಭವನ ನಿರ್ಮಿಸಿದ್ದರು. 40 ವರ್ಷದಿಂದ ಇಲ್ಲಿ ದಲಿತ ಸಂಘರ್ಷ ಸಮಿತಿ ದಲಿತರ ಕುಂದು-ಕೊರತೆ ಸಭೆ, ಸಾಂಸ್ಕೃತಿಕ, ತರಬೇತಿ, ಮದುವೆ, ಸಭೆ, ಸಮಾರಂಭ ನಡೆಸಿಕೊಂಡು ಬರಲಾಗುತ್ತಿದೆ. ಉಡುಪಿ ನಗರಸಭೆಯಿಂದ ಸರಿಯಾಗಿ ನಿರ್ವಹಣೆಯಿಲ್ಲದೆ ಶಿಥಿಲಗೊಂಡಿರುವ ಈ ಕಟ್ಟಡವನ್ನು ಉಡುಪಿ ಜಿಲ್ಲಾಧಿಕಾರಿ ಇದೀಗ ಉಡುಪಿಯ ಸಂಜೀವನಿ ಜೀವನೋಪಾಯ ಪ್ರಚಾರ ಮತ್ತು ಮಾರ್ಕೆಟಿಂಗ್ ಸೊಸೈಟಿ, ಮಹಿಳಾ ಸ್ವಸಹಾಯ ಸಂಘಕ್ಕೆ ಹಾಗೂ ಹಿರಿಯ ನಾಗರಿಕ ಸಮಾಲೋಚನಾ ಘಟಕಕ್ಕೆ ಹಸ್ತಾಂತರಿಸಿದ್ದಾರೆ. ಇದು ಜಿಲ್ಲೆಯ ದಲಿತ ಸಮುದಾಯಕ್ಕೆ ಮಾಡಿರುವ ಅನ್ಯಾಯವಾಗಿದೆ. ತಕ್ಷಣ ಆದೇಶ ಹಿಂಪಡೆಯದಿದ್ದಲ್ಲಿ ಪ್ರತಿಭಟನೆ ಅನಿವಾರ್ಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.