ಉಡುಪಿ : ಬಿಜೆಪಿಯಿಂದ ಬಂಡಾಯ ನಿಂತಿದ್ದ ಮಾಜಿ ಶಾಸಕರಾದ ರಘುಪತಿ ಭಟ್ ಸೋಲಿನ ನಂತರ ತಮ್ಮ ಹೇಳಿಕೆಯಲ್ಲಿ, “ನನ್ನ ಸ್ಪರ್ಧೆಯಿಂದ ಸಿಟಿ ರವಿಗೆ ನ್ಯಾಯ ಸಿಕ್ಕಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ. “ಹಿಂದೂತ್ವ ಮತ್ತು ರಾಷ್ಟ್ರೀಯತೆಗೆ ಈ ಮೂಲಕ ವಿಧಾನ ಪರಿಷತ್ತಿನಲ್ಲಿ ಅವಕಾಶ ಸಿಕ್ಕಿದೆ” ಎಂದು ಅವರು ಹಿನ್ನಲೆ ವಿವರಿಸಿದ್ದಾರೆ.
“ಅವಕಾಶ ವಂಚಿತರಿಗೆ ಈ ಹಿಂದೆ ಪದವಿಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಅವಕಾಶ ಸಿಗುತ್ತಿತ್ತು” ಎಂದ ಭಟ್, “ಈ ಚುನಾವಣೆಯಲ್ಲಿ ನನಗೆ ಸಮಯದ ಕೊರತೆ ಆಯಿತು. ಗೆಲ್ಲುವ ವಿಶ್ವಾಸದಲ್ಲೇ ನಾನು ಸ್ಪರ್ಧಿಸಿದ್ದೆ. ಈ ಮಟ್ಟದ ಸೋಲು ನನಗೆ ಅನಿರೀಕ್ಷಿತ. ಇದು ಮತದಾರರ ನಿರ್ಣಯ, ಅದನ್ನು ಸ್ವೀಕರಿಸಬೇಕು.” ಐದು ಜಿಲ್ಲೆಗಳಿಗೂ ಪ್ರವಾಸ ಮಾಡಿ ಅಭಿನಂದಿಸುವುದಾಗಿ ತಿಳಿಸಿದ ಅವರು, “ಸೋಲಿನಿಂದ ನಾನು ಓಡಿ ಹೋಗುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.
ತಮ್ಮ ರಾಜಕೀಯ ಮತ್ತು ಸಾಮಾಜಿಕ ಕಾರ್ಯಗಳನ್ನು ಮುಂದುವರಿಸುವ ಭರವಸೆ ನೀಡಿದ ರಘುಪತಿ ಭಟ್, “ಕಾರ್ಯಕರ್ತರ ಧ್ವನಿಯಾಗಿ ಇರ್ತೇನೆ,” ಮತ್ತು “ಪಕ್ಷವನ್ನು ಎದುರು ಹಾಕಿಕೊಂಡು ನಿಂತಿದ್ದೇನೆ,” ಎಂದರು. “ನನ್ನ ಜೊತೆ ಬಂದವರ ಪರ ಇರೋದು ನನ್ನ ಜವಾಬ್ದಾರಿ” ಎಂದು ಹೇಳಿದರು.
“ಎಚ್ಚರಿಸುವ ಕೆಲಸ ಆಗಬೇಕಿತ್ತು, ಅದನ್ನು ಮಾಡಿದ್ದೇನೆ,” ಮತ್ತು “ಸಾಮಾಜಿಕ ರಾಜಕೀಯ ಜೀವನದಿಂದ ಹಿಂದೆ ಸರಿಯುವುದಿಲ್ಲ,” ಎಂದು ಭರವಸೆ ನೀಡಿದ ರಘುಪತಿ ಭಟ್, “ನನ್ನ ಮನೆ ಸದಾ ನೊಂದವರಿಗೆ, ಸಮಸ್ಯೆ ಇರುವವರಿಗೆ ತೆರೆದಿರುತ್ತದೆ,” ಎಂದು ತಿಳಿಸಿದರು.