ಮಂಗಳೂರು : ನಗರದ ವಿವಿಧೆಡೆ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ಮಧ್ಯದಲ್ಲಿ ಡಿವೈಡರ್ ಇಲ್ಲದಿರುವ ಸ್ಥಳಗಳಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್, ಟ್ರಾಫಿಕ್ ಕೋನ್‌ಗಳನ್ನು ತೆರವುಗೊಳಿಸಿ ಮತ್ತೆ ಶಾಶ್ವತ ಡಿವೈಡರ್‌ಗಳನ್ನು ನಿರ್ಮಿಸಲಾಗುತ್ತಿದೆ.
ನಗರದಲ್ಲಿ 18 ಸ್ಥಳಗಳನ್ನು ಗುರುತಿಸಿ ಪೊಲೀಸ್ ಇಲಾಖೆ ವತಿಯಿಂದ ಮಹಾನಗರ ಪಾಲಿಕೆಗೆ ಪಟ್ಟಿ ನೀಡಲಾಗಿದ್ದು, ಈ ಪೈಕಿ 8 ಸ್ಥಳಗಳಲ್ಲಿ ಈಗಾಗಲೇ ಡಿವೈಡರ್‌ಗಳನ್ನು ನಿರ್ಮಿಸಲಾಗಿದೆ.
ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸುವಾಗ ಕೆಲವು ಕಡೆಗಳಲ್ಲಿ ವಾಹನಗಳು ತಿರುವು ಪಡೆಯಲು ಅನುಕೂಲವಾಗುವಂತೆ ಡಿವೈಡರ್ ನಿರ್ಮಿಸದೆ ಹಾಗೇ ಬಿಡಲಾಗಿತ್ತು. ವಾಹನಗಳ ಸಂಖ್ಯೆ ಹೆಚ್ಚಾದ ಕಾರಣ, ಅಂತಹ ಸ್ಥಳಗಳಲ್ಲಿ ವಾಹನಗಳು ತಿರುವು ಪಡೆದುಕೊಳ್ಳುವಾದ ದಟ್ಟಣೆ ಉಂಟಾಗುತ್ತದೆ ಎಂದು ಪೊಲೀಸ್ ಇಲಾಖೆ ಬ್ಯಾರಿಕೇಡ್, ಟ್ರಾಫಿಕ್ ಕೋನ್‌ಗಳನ್ನು ಅಳವಡಿಸಿತ್ತು. ಕೆಲವು ದ್ವಿಚಕ್ರವಾಹನ ಸವಾರರು ಇವುಗಳ ನಡುವೆಯೂ ವಾಹನ ನುಗ್ಗಿಸಿ ಒಂದು ರಸ್ತೆಯಿಂದ ಇನ್ನೊಂದು ರಸ್ತೆಗೆ ತಿರುವುದು ಪಡೆದುಕೊಳ್ಳುವುದು ಅಲ್ಲಲ್ಲಿ ಕಂಡು ಬರುತ್ತಿತ್ತು. ಆದ್ದರಿಂದ ಇಂತಹ ಸ್ಥಳಗಳಲ್ಲಿ ಶಾಶ್ವತ ಡಿವೈಡರ್‌ಗಳನ್ನು ನಿರ್ಮಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ಸ್ಟೇಟ್ ಬ್ಯಾಂಕ್ ಬಳಿಯ ಹ್ಯಾಮಿಲ್ಟನ್ ವೃತ್ತ ಸಮರ್ಪಕವಾಗಿ ನಿರ್ಮಾಣವಾಗದಿರುವ ಹಿನ್ನೆಲೆಯಲ್ಲಿ ಬ್ಯಾರಿಕೇಡ್‌ಗಳನ್ನು ಇರಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಆ ಸ್ಥಳದಲ್ಲಿ ಮತ್ತೆ ಟ್ರಾಫಿಕ್ ಐಲ್ಯಾಂಡ್‌ಗಳನ್ನು ನಿರ್ಮಿಸಲು ಕಲ್ಲುಗಳನ್ನು ಇರಿಸಲಾಗಿದೆ. ಕೆ.ಎಸ್. ರಾವ್ ರಸ್ತೆಯ ಶರವು ಕ್ರಾಸ್, ಹೊಟೇಲ್ ಪೂಂಜಾ ಆರ್ಕೇಡ್ ಎದುರು ಬ್ಯಾರಿಕೇಡ್‌ಗಳನ್ನು ತೆಗೆದು ಡಿವೈಡರ್ ನಿರ್ಮಿಸಲಾಗಿದೆ.
ಲೇಡಿಗೋಶನ್ ಆಸ್ಪತ್ರೆ ಎದುರಿನ ರಸ್ತೆಯಲ್ಲಿ ಬಸ್ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ. ಬ್ಯಾರಿಕೇಡ್‌ಗಳನ್ನು ಅಳವಡಿಸಿ ಸಿಟಿ ಮತ್ತು ಸರ್ವಿಸ್ ಬಸ್‌ಗಳನ್ನು ರಸ್ತೆಯ ಎಡಬದಿಯಲ್ಲಿ ಮತ್ತು ಎಕ್ಸ್‌ಪ್ರೆಸ್ ಹಾಗೂ ಇತರ ವಾಹನಗಳನ್ನು ಬ್ಯಾರಿಕೇಡ್‌ನ ಬಲಬದಿಯಲ್ಲಿ ಸಂಚರಿಸಲು ಕೆಲವು ತಿಂಗಳುಗಳಿಂದ ವ್ಯವಸ್ಥೆ ಮಾಡಲಾಗಿದೆ. ಹೊಸ ಬದಲಾವಣೆಯಂತೆ ರಾವ್ ಆ್ಯಂಡ್ ರಾವ್ ವೃತ್ತದಿಂದ ಟೌನ್ ಹಾಲ್ ಮುಂಭಾಗದ ವರೆಗೆ ಡಿವೈಡರ್ ನಿರ್ಮಿಸಿ ಎಲ್ಲ ಬಸ್‌ಗಳು ಡಿವೈಡರ್‌ನ ಬಲಬದಿಯಿಂದಲೇ ಸಂಚರಿಸುವಂತೆ ಮಾಡಲು ಉದ್ದೇಶಿಸಲಾಗಿದೆ. ಇತರ ವಾಹನಗಳು ಎಡಬದಿಯಲ್ಲಿ ಅವಕಾಶ ನೀಡಲಾಗುತ್ತದೆ.
ಲೇಡಿಗೋಶನ್ ಬಳಿ ಯಾವುದೇ ಬಸ್‌ಗಳಿಗೆ ನಿಲುಗಡೆ ಇಲ್ಲ. ನಿಲ್ದಾಣದಿಂದ ಹೊರಡುವ ಬಸ್‌ಗಳಿಗೆ ಹಂಪನಕಟ್ಟೆವರೆಗೆ ಯಾವುದೇ ನಿಲುಗಡೆ ಇರುವುದಿಲ್ಲ. ಸ್ಟೇಟ್‌ಬ್ಯಾಂಕ್ ಭಾಗದ ಪ್ರಯಾಣಿಕರು ತಂಗುದಾಣಕ್ಕೆ ಬಂದೇ ಬಸ್‌ಗಳನ್ನು ಹಿಡಿಯಬೇಕು ಎನ್ನುವುದು ಪೊಲೀಸರ ಚಿಂತನೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂದು ಅನುಷ್ಠಾನಕ್ಕೆ ಬಂದ ಬಳಿಕವಷ್ಟೇ ತಿಳಿಯಲಿದೆ.
ನಗರದ ವಿವಿಧೆಡೆ ಸುಗಮ ವಾಹನ ಸಂಚಾರ ಉದ್ದೇಶದಿಂದ ಒಂದಷ್ಟು ಬದಲಾವಣೆಗಳನ್ನು ತರಲು ಉದ್ದೇಶಿಸಲಾಗಿದೆ. ಡಿವೈಡರ್‌ಗಳ ಬದಲಾಗಿ ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ಮತ್ತೆ ಡಿವೈಡರ್‌ಗಳನ್ನು ನಿರ್ಮಿಸಲಾಗುತ್ತಿದೆ. ಹೊಸ ಬದಲಾವಣೆಗೆ ಸಾರ್ವಜನಿಕರ ಸಹಕಾರವೂ ಅಗತ್ಯವಿದೆ ಎಂದು ಬಿ.ಪಿ. ದಿನೇಶ್ ಕುಮಾರ್, ಡಿಸಿಸಿ, ಅಪರಾಧ, ಸಂಚಾರ ವಿಭಾಗ ತಿಳಿಸಿದ್ದಾರೆ.
ಅಂಬೇಡ್ಕರ್ ವೃತ್ತದಿಂದ ಬಂಟ್ಸ್ ಹಾಸ್ಟೆಲ್ ಕಡೆಗೆ ಸಾಗುವ ರಸ್ತೆಯಲ್ಲಿ ಸೋಮಯಾಜಿ ಬಿಲ್ಡಿಂಗ್ ಎದುರು ಮತ್ತು ಮಹಾರಾಜ ಹೊಟೇಲ್ ಎದುರು ಕೋನ್‌ಗಳನ್ನು ತೆಗೆದು ಡಿವೈಡರ್ ನಿರ್ಮಾಣ ಮಾಡಲಾಗಿದೆ. ಲೇಡಿಗೋಶನ್ ಆಸ್ಪತ್ರೆ ಎದುರು, ಕರಂಗಲಪಾಡಿ ಜಂಕ್ಷನ್, ಬಂಟ್ಸ್ ಹಾಸ್ಟೆಲ್ ಜಂಕ್ಷನ್, ಭಾರತ್ ಬೀಡಿ ಜಂಕ್ಷನ್, ಸೈಂಟ್ ಆ್ಯಗ್ನೇಸ್ ಕಾಲೇಜು ಮುಂಭಾಗದಲ್ಲಿ, ಬೆಂದೂರುವೆಲ್ ಜಂಕ್ಷನ್, ಕರಾವಳಿ ಜಂಕ್ಷನ್, ಕಂಕನಾಡಿ ಜಂಕ್ಷನ್ 1 ಮತ್ತು 2ರಲ್ಲಿರುವ ಬ್ಯಾರಿಕೇಡ್‌ಗಳನ್ನು ತೆರವು ಗೊಳಿಸಿ ಡಿವೈಡರ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.