ಉಡುಪಿ : ಸಂಸತ್ ಅಧಿವೇಶನದಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಕುರಿತು ಕೇಂದ್ರ ಸಚಿವ ಅಮಿತ್ ಶಾ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ವತಿಯಿಂದ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆ ನಡೆಸಲಾಯಿತು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ದಿಕ್ಕಾರ ಕೂಗಿದರು. ಅಮಿತ್ ಶಾರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಜನಪರ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ, ದೇಶದಲ್ಲಿ ಬ್ರಾಹ್ಮಣ್ಯವಾದವನ್ನು ಹೇರಬೇಕು, ಅಂಬೇಡ್ಕರ್ ನೀಡಿದ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬೇಕು ಮತ್ತು ಸಂವಿಧಾನವನ್ನು ನಾಶ ಮಾಡಬೇಕೆಂಬ ಪಿತೂರಿ ಅಮಿತ್ ಶಾ ಹೇಳಿಕೆಯ ಹಿಂದೆ ಅಡಗಿದೆ. ಸಂವಿಧಾನ, ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡಬೇಕಾದ ಇವರೇ ಕಂಟಕ ಆಗಿ ಬಿಟ್ಟಿದ್ದಾರೆ. ನಾಶ ಮಾಡುವ ಹೇಳಿಕೆ ನೀಡುತ್ತಿದ್ದಾರೆ.
ಅಂಬೇಡ್ಕರ್ ನೀಡಿದ ಸಂವಿಧಾನ ಹಾಗೂ ಬುದ್ಧ ಚಿಂತನೆಯನ್ನು ಹಂತಹಂತವಾಗಿ ನಾಶ ಮಾಡುವ ಉದ್ದೇಶ ಇವರದ್ದಾಗಿದೆ. ಇದು ಇವರಿಗೆ ಈ ಜನ್ಮದಲ್ಲಿ ಸಾಧ್ಯವಿಲ್ಲ. ಸಂಘಪರಿವಾರದ ಈ ಕುತಂತ್ರ ಯಶಸ್ವಿಯಾಗಲು ನಾವು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ಚಿಂತಕ ನಾರಾಯಣ ಮಣೂರು, ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ, ದಲಿತ ಮುಖಂಡ ಶೇಖರ್ ಹಾವಂಜೆ ಮಾತನಾಡಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಮನುಸ್ಮೃತಿ ಸುಟ್ಟ ದಿನದ ಅಂಗವಾಗಿ ಮನುಸ್ಮೃತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.
ಪ್ರತಿಭಟನೆಯಲ್ಲಿ ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಯುವಸೇನೆ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ಸ್ಥಾಪಕಾಧ್ಯಕ್ಷ ಹರೀಶ್ ಸಾಲ್ಯಾನ್, ಸಿಐಟಿಯು ಮುಖಂಡ ವೆಂಕಟೇಶ್ ಕೋಣಿ, ಪ್ರಮುಖರಾದ ಮಹಾಬಲ ಕುಂದರ್, ಪ್ರಶಾಂತ್ ತೊಟ್ಟಂ ಮೊದಲಾದವರು ಉಪಸ್ಥಿತರಿದ್ದರು.