ಮಣಿಪಾಲ : ಬಾಲ್ಯದ ಕ್ಯಾನ್ಸರ್‌ಗಳನ್ನು ಆರಂಭದಲ್ಲೇ ಪತ್ತೆ ಹಚ್ಚಿ ತಜ್ಞ ವೈದ್ಯರ ತಂಡದಿಂದ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದರೆ ಸಂಪೂರ್ಣವಾಗಿ ಗುಣಪಡಿಸಬಹುದು. ಸೆಪ್ಟೆಂಬರ್ ತಿಂಗಳು ಅಂತರರಾಷ್ಟ್ರೀಯ ಬಾಲ್ಯದ ಕ್ಯಾನ್ಸರ್ ಜಾಗೃತಿ ಮಾಸವಾಗಿದ್ದು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮಣಿಪಾಲದ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗವು ಶನಿವಾರ ಆಕ್ಸೆಸ್‌ಲೈಫ್ ಅಸಿಸ್ಟೆನ್ಸ್ ಫೌಂಡೇಶನ್ ಜೊತೆಗೆ ಆಸ್ಪತ್ರೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಬಾಲ್ಯದ ಕ್ಯಾನ್ಸರ್ ಗುಣಪಡಿಸುವ ಸಾಮರ್ಥ್ಯ ಮತ್ತು ಅವಕಾಶದ ಜಾಗೃತಿ ಮೂಡಿಸಲು ಕಾರಂಜಿಗಳನ್ನು ಚಿನ್ನದ ಬಣ್ಣದಿಂದ ಬೆಳಗಿಸಿತು.
ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರಾದ ಡಾ.ವಾಸುದೇವ ಭಟ್ ಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ‘ಭಾರತದಲ್ಲಿ ಪ್ರತಿ ವರ್ಷ ಸುಮಾರು 78,000 ಮಕ್ಕಳು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ ಮತ್ತು ನಮ್ಮ ದೇಶದಲ್ಲಿ ಕಡಿಮೆ ಗುಣಮುಖರಾಗಲು ಪ್ರಮುಖವಾಗಿ ತಡವಾದ ರೋಗನಿರ್ಣಯ, ಕ್ಯಾನ್ಸರ್‌ನ ಕುರಿತು ಅಂಟಿಕೊಂಡಿರುವ ಮೂಡನಂಬಿಕೆಗಳು, ಸಂಪನ್ಮೂಲಗಳ ಕೊರತೆ ಮತ್ತು ಇತರ ಸಂಬಂಧಿತ ಸೋಂಕುಗಳು ಕಾರಣವಾಗಿದೆ ಎಂದರು.
ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರು, ವಿದ್ಯಾರ್ಥಿ ಸಮಿತಿ ಸ್ವಯಂಸೇವಕರು ಮತ್ತು ಇತರ ಸ್ವಯಂಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಕ್ಕಳು ಮತ್ತು ಅವರ ಆರೈಕೆ ಮಾಡುವವರ ಬೆಂಬಲದ ಸಂಕೇತವನ್ನು ತೋರಿಸಲು ಸಾಕ್ಷಿಯಾದರು.
ಕಾರ್ಯಕ್ರಮಕ್ಕೂ ಮುನ್ನ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್‌ನಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಿರುವ ಮಕ್ಕಳಿಗಾಗಿ ಮನರಂಜನಾ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ಕೆಎಂಸಿ ಸಾಂಸ್ಕೃತಿಕ ಸಮಿತಿಯ ಸದಸ್ಯರಿಂದ ಜಾಗೃತಿ ಕುರಿತಾದ ಕಿರುನಾಟಕ ಮತ್ತು ಮನರಂಜನಾ ಕಾರ್ಯಕ್ರಮ ನಡೆಯಿತು.